ಒಟ್ಟಿಗೆ ಸುತ್ತಾಡುತ್ತಿದ್ದ ಅನ್ಯಕೋಮಿನ ಯುವಕ-ಯುವತಿ ಮೇಲೆ ನೈತಿಕ ಪೊಲೀಸ್‌ಗಿರಿ; ಮಂಗಳೂರಲ್ಲಿ ಇಬ್ಬರ ಬಂಧನ

ಮಂಗಳೂರು: ಒಟ್ಟಿಗೆ ಸುತ್ತಾಡುತ್ತಿದ್ದ ಅನ್ಯಕೋಮಿನ ಯುವಕ ಹಾಗೂ ಯುವತಿಯನ್ನು ಬೆನ್ನಟ್ಟಿ ಬಜರಂಗದಳ ಕಾರ್ಯಕರ್ತರು ನೈತಿಕ ಪೊಲೀಸ್‌ಗಿರಿಗೆ ಯತ್ನಿಸಿದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನ ಮೊರ್ಗನ್ಸ್ ಗೇಟ್ ಬಳಿ‌ ಈ ಘಟನೆ ನಡೆದಿದೆ. ಮಂಗಳೂರಿನ ಮಂಕಿಸ್ಟ್ಯಾಂಡ್‌ ನಿವಾಸಿ ಅನ್ಯಕೋಮಿನ ಯುವಕನೊಂದಿಗೆ‌ ಚಿಕ್ಕಮಗಳೂರಿನ‌ ಯುವತಿ ಸುತ್ತಾಡುತ್ತಿದ್ದಳು. ಮಂಕಿಸ್ಟೆಂಡ್‌ನ ಮಳಿಗೆಯೊಂದರಲ್ಲಿ ಈ ಜೋಡಿ ಉದ್ಯೋಗದಲ್ಲಿದ್ದಾರೆ.

ಸ್ಕೂಟರ್‌ನಲ್ಲಿ ಜೋಡಿ ಸುತ್ತಾಟ ಗಮನಿಸಿ ಬಜರಂಗದಳ ಕಾರ್ಯಕರ್ತರು ಬೈಕ್‌ನಲ್ಲಿ ಬೆನ್ನಟ್ಟಿದ್ದಾರೆ. ಮಂಕಿಸ್ಟ್ಯಾಂಡ್‌ ಬಳಿ ಸ್ಕೂಟರ್ ಅಡ್ಡ ಹಾಕಿ ಜೋಡಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಎರಡೂ ಕೋಮಿನ ಯುವಕರ ತಂಡ ಸ್ಥಳದಲ್ಲಿ ಜಮಾಯಿಸಿದ್ದು, ಮಾತಿನ ಚಕಮಕಿ ನಡೆದಿದೆ.

ಪರಿಸ್ಥಿತಿ ವಿಕೋಪಕ್ಕೆ ತಿರುಗುವಷ್ಟರಲ್ಲಿ ಪಾಂಡೇಶ್ವರ ಠಾಣೆಯ ಪೊಲೀಸರು ಮಧ್ಯ ಪ್ರವೇಶಿಸಿದ್ದಾರೆ. ಗುಂಪು ಚದುರಿಸಿ ಅನ್ಯಕೋಮಿನ ಜೋಡಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅಲ್ಲದೇ ನೈತಿಕ ಪೊಲೀಸ್‌ಗಿರಿ ಪ್ರಕರಣದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಅಕ್ಷಯ್ ರಾವ್ ಹಾಗೂ ಶಿಬಿನ್ ಪಡಿಕಲ್ ಎಂಬಿಬ್ಬರನ್ನು ಪಾಂಡೇಶ್ವರ ಪೊಲೀಸರಿಂದ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.