ಉಪನಿರ್ದೇಶಕ ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ಕಿತ್ತಾಟ!

ಹಾಸನ: ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶನ ಹುದ್ದೆಗಾಗಿ ಇಬ್ಬರು ಅಧಿಕಾರಿಗಳು ಕಿತ್ತಾಟ ನಡೆಸುತ್ತಿರುವುದರಿಂದಾಗಿ ಸಾರ್ವಜನಿಕರ ಕೆಲಸ-ಕಾರ್ಯಗಳು ಅರ್ಧಕ್ಕೆ ನಿಂತುಕೊಂಡಿವೆ.

ಹೌದು. ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ನಡುವೆ ಹುದ್ದೆಗಾಗಿ ಕಿತ್ತಾಟ ಶುರುವಾಗಿದೆ. ಕಳೆದ ಒಂದೂವರೆ ವರ್ಷದಿಂದ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಧರ್ ಎಂಬುವರನ್ನು ಸಿಎಂ ತವರು ಕ್ಷೇತ್ರ ರಾಮನಗರಕ್ಕೆ ವರ್ಗಾವಣೆ ಮಾಡಿ, ಅವರ ಸ್ಥಾನಕ್ಕೆ ಈ ಹಿಂದೆ ಹಾಸನ ಜಿಲ್ಲೆಯಲ್ಲೇ ಇದ್ದ ಪುರುಷೋತ್ತಮ್ ಎಂಬುವರನ್ನು ನಿಯೋಜನೆ ಮಾಡಲಾಗಿತ್ತು. ಆದರೆ ಹಾಸನದಿಂದ ಹೋಗದೆ ಶ್ರೀಧರ್ ರವರು ಲೋಕೋಪಯೋಗಿ ಸಚಿವರಾದ ಎಚ್.ಡಿ.ರೇವಣ್ಣ ಪತ್ನಿ ಭವಾನಿಯವರ ಪ್ರಭಾವದಿಂದ ಇಲ್ಲೇ ಉಳಿಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಜಿಲ್ಲೆಗೆ ವರ್ಗವಾಗಿ ಬಂದಿರುವ ಪುರುಷೋತ್ತಮ್‍ರವರು ಜಿಲ್ಲಾ ಸಮಾಜ ಕಲ್ಯಾಣ ಉಪ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಮೂಲಗಳ ಪ್ರಕಾರ ಹಾಸನ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಗೆದ್ದಿರುವ ವಿಧಾನ ಪರಿಷತ್ ಸದಸ್ಯ ಕಾಂಗ್ರೆಸ್ ನ ಗೋಪಾಲಸ್ವಾಮಿಯವರ ಶಿಫಾರಸ್ಸಿನ ಮೇರೆಗೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಪುರುಷೋತ್ತಮ್ ಅವರನ್ನು ಹಾಸನಕ್ಕೆ ವರ್ಗ ಮಾಡಿದ್ದಾರೆ. ಇದರಿಂದ ಹೆಚ್.ಡಿ.ರೇವಣ್ಣ ಅಸಮಾಧಾನಗೊಂಡಿದ್ದು, ಇದೇ ಕಾರಣದಿಂದಾಗಿ ಭೇಟಿಯಾಗಲು ಬಂದ ಪುರುಷೋತ್ತಮ್ ಅವರೊಂದಿಗೆ ಸಚಿವರು ಸಕಾರಾತ್ಮವಾಗಿ ಸ್ಪಂದಿಸುತ್ತಿಲ್ಲ ಎಂದು ತಿಳಿದುಬಂದಿದೆ.

ಅಧಿಕಾರಿಗಳ ಕಚ್ಚಾಟದಿಂದ ಬೇಸತ್ತ ಸಾರ್ವಜನಿಕರು, ಆಯಕಟ್ಟಿನ ಸ್ಥಳದಲ್ಲಿರುವ ಒಂದೇ ಹುದ್ದೆಗೆ ಇಬ್ಬರು ಅಧಿಕಾರಿಗಳು ಕಚ್ಚಾಡುವುದು ಸರಿಯಲ್ಲ. ಇವರಿಗೆ ಸಮಾಜ ಕಲ್ಯಾಣ ಇಲಾಖೆ ಮೇಲೆ ಕಾಳಜಿ ಇದ್ದರೆ ಇಬ್ಬರು ಬೇರೆ ಕಡೆ ಹೋಗಿ ಕೆಲಸ ಮಾಡಲಿ. ಇವರ ಬದಲಿಗೆ ಬೇರೆಯವರು ಬರಲಿ ಎಂದು ಹೇಳುತ್ತಿದ್ದಾರೆ. ಅಲ್ಲದೇ ಉಭಯ ಪಕ್ಷಗಳ ನಾಯಕರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ದಲಿತ ಅಧಿಕಾರಿಗಳನ್ನು ಕಚ್ಚಾಡುವಂತೆ ಮಾಡಿದ್ದಾರೆ. ದಲಿತ ಸಮುದಾಯಗಳ ಒಳ ಪಂಗಡಗಳನ್ನು ಒಡೆಯುವ ಕೆಲಸ ನಡೆಯುತ್ತಿದೆ ಎಂದು ದಲಿತ ಸಂಘಟನೆಯಾದ ಸಮತಾ ಸೈನಿಕ ದಳದ ಮುಖಂಡ ಸತೀಶ್ ಆರೋಪಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Comments

Leave a Reply

Your email address will not be published. Required fields are marked *