ನೆಲಕ್ಕುರುಳಿದ ಗಗನಚುಂಬಿ ಕಟ್ಟಡ- 4 ಅಪಾರ್ಟ್​ಮೆಂಟ್​ಗಳ ಪೈಕಿ 2 ನೆಲಸಮ

– 800 ಕೆಜಿ ಸ್ಫೋಟಕ ಬಳಸಿ ಬ್ಲಾಸ್ಟ್

ತಿರುವನಂತಪುರಂ: ನಿಯಮಮೀರಿ ಕೆರೆದಂಡೆಯ ಮೇಲೆ ಅಕ್ರಮವಾಗಿ ಕಟ್ಟಿದ್ದ ಅಪಾರ್ಟ್​ಮೆಂಟ್​ಗಳನ್ನು ನೆಲಸಮ ಮಾಡುವ ಕೆಲಸವನ್ನು ಕೇರಳ ಸರ್ಕಾರ ಶುರುಮಾಡಿದೆ.

ಸುಪ್ರೀಕೋರ್ಟ್ ನ ಆದೇಶದ ಬೆನ್ನಲ್ಲೇ ಸುಮಾರು ನಾಲ್ಕು ತಿಂಗಳ ನಂತರ ಕಟ್ಟಡವನ್ನು ನೆಲಸಮ ಮಾಡಲು ಸರ್ಕಾರ ಮುಂದಾಗಿದೆ. ಕೇರಳದ ಕೊಚ್ಚಿಯ ತೀರ ಪ್ರದೇಶದ ಮರಡು ವಸತಿ ಪ್ರದೇಶದ ಹಿನ್ನೀರಿನಲ್ಲಿ ಅಕ್ರಮವಾಗಿ ನಿರ್ಮಾಣವಾಗಿದ್ದ ನಾಲ್ಕು ಗಗನಚುಂಬಿ ಅಪಾರ್ಟ್​ಮೆಂಟ್​ಗಳ ನೆಲಸಮ ಶುರುವಾಗಿದೆ. ಇಂದು 4 ಅಪಾರ್ಟ್​ಮೆಂಟ್​ಗಳ ಪೈಕಿ 2 ಅಪಾರ್ಟ್​ಮೆಂಟ್​ಗಳನ್ನು 800 ಕೆಜಿ ಸ್ಫೋಟಕ ಬಳಸಿ ನೆಲಸಮ ಮಾಡಲಾಗಿದೆ.

ಈ ನಾಲ್ಕು ಅಪಾರ್ಟ್​ಮೆಂಟ್​ಗಳಲ್ಲಿ 350 ಫ್ಲ್ಯಾಟ್‍ಗಳು ಇದ್ದವು. 90 ಫ್ಲ್ಯಾಟ್ ಹೊಂದಿದ್ದ 19 ಫ್ಲೋರ್ ನ 60 ಮೀಟರ್ ಎತ್ತರದ H2O ಹೋಲಿಫೇತ್ ಅಪಾರ್ಟ್​ಮೆಂಟ್​ ಮತ್ತು 73 ಫ್ಲ್ಯಾಟ್ ಹೊಂದಿದ್ದ ಆಲ್ಫಾ ಸಿರೀನ್ ಅಪಾರ್ಟ್​ಮೆಂಟ್​ಗಳ ಧ್ವಂಸವಾಗಿದೆ. ಈ ಅಪಾರ್ಟ್​ಮೆಂಟ್​ಗಳಲ್ಲಿ 240 ಕುಟುಂಬಗಳು ಆಶ್ರಯ ಪಡೆದುಕೊಂಡಿದ್ದವು.

ಕೋಸ್ಟಲ್ ರೆಗ್ಯುಲೇಷನ್ ಝೋನ್ ರೂಲ್ಸ್ ಉಲ್ಲಂಘಿಸಿ ಅಪಾರ್ಟ್​ಮೆಂಟ್​ ನಿರ್ಮಾಣ ಮಾಡಲಾಗಿತ್ತು. ನದಿಯ ಪಕ್ಕ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಇದರಿಂದ ಎಲ್ಲಾ ಕಾನೂನು ನಿಯಮಗಳನ್ನು ಮೀರಿ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದು ಸುಪ್ರೀಂಕೋರ್ಟ್ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಅಪಾರ್ಟ್​ಮೆಂಟ್​ಗಳ ಧ್ವಂಸಕ್ಕೆ ಸೂಚನೆ ಕೊಟ್ಟಿತ್ತು.

ಅಲ್ಲದೇ ಸುಪ್ರೀಕೋರ್ಟ್ ಅಕ್ರಮ ಗಗನಚುಂಬಿ ಕಟ್ಟಡಗಳ ತೆರವಿಗೆ 138 ದಿನಗಳ ಡೆಡ್‍ಲೈನ್ ನೀಡಿತ್ತು. ಇದೀಗ ಕೋರ್ಟ್ ಆದೇಶದಂತೆ ನಾಲ್ಕು ಕಟ್ಟಗಳಲ್ಲಿ ಇಂದು ಎರಡು ಕಟ್ಟಡವನ್ನು ನೆಲಸಮ ಮಾಡಲಾಗಿದೆ. ಎರಡು ಅಪಾರ್ಟ್ ಮೆಂಟ್​ಗಳ ನೆಲಸಮ ಮಾಡಲು ಸುಮಾರು 800 ಕೆಜಿ ಸ್ಫೋಟಕವನ್ನು ಬಳಸಲಾಗಿದೆ. ಕ್ಷಣಾರ್ಧದಲ್ಲಿ ಕಟ್ಟಡಗಳು ನೆಲಕ್ಕುರುಳಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಈಗಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ನೆರೆಹೊರೆಯವನ್ನು ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಸೂಚಿಸಲಾಗಿತ್ತು. ಅಲ್ಲದೇ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿದೆ. ಮನೆ ಕಳೆದುಕೊಂಡವರಿಗೆ ತಲಾ 25 ಲಕ್ಷ ಪರಿಹಾರ ಕೊಡುವಂತೆ ಕೋರ್ಟ್ ಸೂಚನೆ ನೀಡಿದೆ. ಭಾನುವಾರ ಜೈನ್ ಕೋರಲ್ ಕೋವ್ ಮತ್ತು ಗೋಲ್ಡನ್ ಕಯಾಲೋರಾಂ ಅಪಾರ್ಟ್​ಮೆಂಟ್​ಗಳನ್ನು ನೆಲಸಮ ಮಾಡಲಾಗುತ್ತದೆ.

Comments

Leave a Reply

Your email address will not be published. Required fields are marked *