ನೀರಿಗೆ ಹಾರಿದ ವ್ಯಕ್ತಿಯನ್ನು ನೋಡಲು ಜನ ಸೇರಿದ್ದ ವೇಳೆ ಸೇತುವೆ ಕುಸಿತ: ಇಬ್ಬರ ದುರ್ಮರಣ

ಪಣಜಿ: ದಕ್ಷಿಣ ಗೋವಾದ ಸಾನ್ವೋರ್‍ಡೆಮ್ ಹಾಗೂ ಕೊರ್ಕೊರೆಮ್ ಗ್ರಾಮದ ಮಧ್ಯೆ ನಿರ್ಮಿಸಲಾದ ಪೋರ್ಚುಗೀಸ್ ಕಾಲದ ಕಬ್ಬಿಣದ ಸೇತುವೆ ಕುಸಿದು ಮಹಾ ದುರಂತವೊಂದು ಗುರುವಾರ ಸಂಭವಿಸಿದೆ.

ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಹಲವು ಮಂದಿ ನಾಪತ್ತೆಯಾಗಿದ್ದಾರೆ. ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ನೋಡಲು ಜನ ಸೇರಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಘಟನೆ ಸಂಭವಿಸಿದ ಮಾಹಿತಿ ತಿಳಿದ ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಘಟನೆಯಲ್ಲಿ 50 ಮಂದಿ ನದಿಪಾಲಾದವರ 20 ಮಂದಿ ಈಜಿ ದಡ ಸೇರಿದ್ದರೆ, 14 ಮಂದಿಯನ್ನು ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

15ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ನಾಪತ್ತೆಯಾದವರಿಗಾಗಿ ತೀವ್ರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸಮರೋಪಾದಿಯಲ್ಲಿ ರಾತ್ರಿಯಿಡಿ ಕಾರ್ಯಾಚರಣೆ ನಡೆಯಿತು. ಎರಡು ಮೃತದೇಹವನ್ನು ಪತ್ತೆಹಚ್ಚಲಾಗಿದ್ದು, ಉಳಿದವರಿಗಾಗಿ ಶೋಧಕಾರ್ಯ ನಡೆದಿದೆ. ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಇದೀಗ ಹೆಚ್ಚಿನ ಕಾರ್ಯಾಚರಣೆಗಾಗಿ ಭಾರತೀಯ ನೌಕಾದಳಕ್ಕೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ದೌಡಾಯಿಸಿರುವ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರು ಕಾರ್ಯಚರಣೆಯನ್ನು ಪರಿಶೀಲಿಸುತ್ತಿದ್ದಾರೆ.

ಸೇತುವೆ ಕುಸಿತಕ್ಕೂ ಮುನ್ನ ಅದೇ ಸೇತುವೆಯಿಂದ ವ್ಯಕ್ತಿಯೋರ್ವ ನೀರಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದನಂತೆ. ನೀರಿಗೆ ಬಿದ್ದ ಆ ವ್ಯಕ್ತಿಯನ್ನು ನೋಡಲು ಸುಮಾರು 50 ಜನ ಸೇತುವೆ ಒಂದು ತುದಿಗೆ ಬಂದು ನಿಂತಿದ್ದಾರೆ. ಮೊದಲೇ ಶಿಥಿಲಗೊಂಡಿದ್ದ ಸೇತುವೆ ಅಷ್ಟು ಜನರ ಭಾರ ತಾಳಲಾರದೆ ಕುಸಿದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *