ಎರಡು ದಿನ ಭಾರತ್ ಬಂದ್ – ಏನಿರುತ್ತೆ? ಏನಿರಲ್ಲ?

ಬೆಂಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಹಾಗೂ ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಎರಡು ದಿನಗಳ ಬಂದ್‍ಗೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಹಾಗೂ ಆಟೋ ಚಾಲಕರು ಬೆಂಬಲ ನೀಡಿದ್ದು, ಎಂದಿನಂತೆ ಓಲಾ, ಊಬರ್ ಸಂಚಾರ ಆಗಲಿದೆ.

ನಗರದ ಖಾಸಗಿ ಶಾಲೆಗಳ ಸಂಘ ಬಂದ್ ಕಾರಣ ಎಲ್ಲಾ ಶಾಲಾ ಕಾಲೇಜುಗಳಿಗೆ 2 ದಿನಗಳ ರಜೆ ಘೋಷಣೆ ಮಾಡಿದೆ. ಉಳಿದಂತೆ ಸರ್ಕಾರಿ ಶಾಲೆ ಕಾಲೇಜುಗಳ ರಜೆ ಬಗ್ಗೆ ತೀರ್ಮಾನ ಕೈಗೊಳ್ಳಬೇಕಿದೆ. ಉಳಿದಂತೆ ಬಹುತೇಕ ವಿಶ್ವವಿದ್ಯಾಲಯಗಳ ಪರೀಕ್ಷೆಗಳು ಮುಂದೂಡಿಕೆ ಮಾಡಲಾಗಿದೆ.

ಏನಿರುತ್ತೆ?
ಚಿತ್ರ ಮಂದಿರ, ಮಾಲ್, ಮೆಟ್ರೋ, ಎಸ್‍ಬಿಐ ಬ್ಯಾಂಕ್, ಹೋಟೆಲ್, ಆಸ್ಪತ್ರೆ, ಆಂಬುಲೆನ್ಸ್, ಹಾಲು-ತರಕಾರಿ, ಸರ್ಕಾರಿ ಕಚೇರಿ.

ಏನಿರಲ್ಲ?
ಸರ್ಕಾರಿ ಬಸ್, ಆಟೋ ಸಂಚಾರ, ಖಾಸಗಿ ಶಾಲಾ-ಕಾಲೇಜು, ಬ್ಯಾಂಕ್ ಸೇವೆ, ಎಪಿಎಂಸಿ ಮಾರುಕಟ್ಟೆ

ಬಂದ್‍ಗೆ ಯಾರ್ಯಾರ ಬೆಂಬಲ?
ಎಐಟಿಯುಸಿ, ಎನ್‍ಐಡಿಯುಸಿ, ಸಿಐಟಿಯು ಸಂಘಟನೆ ಬೆಂಬಲ ನೀಡಿದ್ದು, ಇತ್ತ ಕೆಎಸ್‍ಆರ್‍ಟಿಸಿ, ಬಿಎಂಟಿಸಿ ನೌಕರರ ಸಂಘ, ಬಾಷ್ ಕಾರ್ಮಿಕ ಸಂಘಟನೆ, ಬ್ಯಾಂಕ್ ಫೆಡರೇಷನ್ ಆಫ್ ಇಂಡಿಯಾ, ಪೀಣ್ಯ ಕೈಗಾರಿಕಾ ಕಾರ್ಮಿಕ ಸಂಘಟನೆ, ಟಯೋಟಾ ಕಿರ್ಲೋಸ್ಕರ್ ಕಾರ್ಮಿಕರ ಸಂಘ, ಗಾರ್ಮೆಂಟ್ಸ್ ಸಂಘಟನೆ, ಅಂಗನವಾಡಿ ನೌಕರರು, ಕಟ್ಟಡ ಕಾರ್ಮಿಕ ಸಂಘಟನೆ, ಎಸ್‍ಎಫ್‍ಐ ವಿದ್ಯಾರ್ಥಿ ಸಂಘಟನೆ, 50ಕ್ಕೂ ಹೆಚ್ಚು ರೈತ ಸಂಘಟನೆಗಳು, ಎಪಿಎಂಸಿ ಸಂಘ ಬಂದ್ ಗೆ ಬೆಂಬಲ ನೀಡಿದೆ.

ಉಳಿದಂತೆ ಎಲ್ಲಾ ಜಿಲ್ಲಾ ಕೇಂದ್ರಗಳದ ಬೆಳಗಾವಿ, ಹಾಸನ, ಮಂಗಳೂರು, ಹುಬ್ಬಳ್ಳಿ, ಕಲಬುರಗಿ, ಉಡುಪಿ, ದಕ್ಷಿಣ ಕನ್ನಡ, ಹುಬ್ಬಳ್ಳಿಯಲ್ಲಿ ಸರ್ಕಾರಿ ಸಾರಿಗೆ ವ್ಯವಸ್ಥೆ ಲಭ್ಯವಿರುವುದಿಲ್ಲ. ಉಳಿದಂತೆ ಆಟೋ, ಟ್ಯಾಕ್ಸಿ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಅಲ್ಲದೇ ಸರ್ಕಾರಿ ಶಾಲೆಗೆ ರಜೆ ನೀಡುವ ನಿರ್ಧಾರವನ್ನು ಆಯಾ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಬಳ್ಳಾರಿ, ಚಾಮರಾಜನಗರ, ಮೈಸೂರಿನಲ್ಲಿ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದ್ದು, 2 ದಿನಗಳ ಬದಲಾಗಿ ಶನಿವಾರ ಹಾಗೂ ಭಾನುವಾರ ತರಗತಿಗಳು ನಡೆಯಲಿದೆ. ಧಾರವಾಡದಲ್ಲಿ 8 ರಂದು ಮಾತ್ರ ರಜೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಮಾಹಿತಿ ನೀಡಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಖಾಸಗಿ ಬಸ್ ಮಾಲೀಕರು ಬಂದ್ ಗೆ ಬೆಂಬಲ ನೀಡಿಲ್ಲ. ಆದರೆ ಉಡುಪಿ ಜಿಲ್ಲೆಯಲ್ಲಿ ಬಂದ್ ಗೆ ಮಾಲೀಕರು ಬೆಂಬಲ ವ್ಯಕ್ತಪಡಿಸಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ ಶಾಲೆ ಕಾಲೇಜುಗಳು ಸರ್ಕಾರಿ ಕಚೇರಿಗಳು ಯಥಾಸ್ಥಿತಿ ಇರಲಿದೆ ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಮಾಹಿತಿ ನೀಡಿದ್ದಾರೆ. ಹಾಸನದಲ್ಲಿಯೂ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾಹಿತಿ ನೀಡಿದ್ದಾರೆ.

ನಾಳೆ ಯಾವ ಪರೀಕ್ಷೆಗಳು ಇರಲ್ಲ?
ಬೆಳಗಾವಿ ರಾಣಿ ಚೆನ್ನಮ್ಮ ವಿವಿ, ಧಾರವಾಡ ಕರ್ನಾಟಕ ವಿ.ವಿ, ಶಿವಮೊಗ್ಗ ಕುವೆಂಪು ವಿವಿ, ತುಮಕೂರು ವಿವಿ ಮಂಗಳವಾರ ಮತ್ತು ಬುಧವಾರ ನಡೆಯಬೇಕಿದ್ದ ಎಲ್ಲ ಪರೀಕ್ಷೆಗಳು ಮುಂದೂಡಿಕೆಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *