ಹುಟ್ಟೂರು ಪುತ್ತೂರು ಬಿಟ್ಟು, ಬೆಂಗಳೂರು ಯಾಕೆ ಸೇರಿಕೊಂಡ್ರಿ – ಡಿವಿಎಸ್‍ಗೆ ಸಿದ್ದು ಗುದ್ದು

ಬೆಂಗಳೂರು: ಕೊಟ್ಟ ಕುದುರೆ ಏರಲಾರದವನು ಧೀರನೂ ಅಲ್ಲ ಶೂರನೂ ಅಲ್ಲ ಎಂಬ ಗಾದೆ ಮಾತು ಹೇಳಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾಲೆಳೆದಿದ್ದ ಬಿಜೆಪಿ ನಾಯಕ, ಮಾಜಿ ಸಿಎಂ ಸದಾನಂದ ಗೌಡ ಅವರನ್ನು ತಮ್ಮದೇ ಶೈಲಿಯಲ್ಲಿ ಪ್ರಶ್ನೆ ಕೇಳಿ ಸಿದ್ದರಾಮಯ್ಯ ಅವರು ಗುದ್ದು ನೀಡಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಸದಾನಂದ ಗೌಡ ಅವರೇ ನಿಮ್ಮ ಅನುಭವವನ್ನು ಸರಿಯಾಗಿ ಹೇಳಿದ್ದೀರಿ, ಕುದುರೆ ಏರಲಾದವನು ಶೂರನೂ ಅಲ್ಲ, ಧೀರನೂ ಅಲ್ಲ. ಎಷ್ಟೆಂದರೂ 11 ತಿಂಗಳಲ್ಲಿಯೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಓಡಿ ಹೋದವರಲ್ವೇ ನೀವು ಎಂದು ವ್ಯಂಗ್ಯ ಮಾಡಿದ್ದಾರೆ.

ಮತ್ತೊಂದು ಟ್ವೀಟ್ ನಲ್ಲಿ, ಊಟ ಮಾಡಿದ್ದೀರಾ? ಎಂದು ಕೇಳಿದರೆ ಮುಂಡಾಸು ಮೂವತ್ತು ಮೊಳ ಎಂದನಂತೆ ಹಳೆಯ ಕಾಲದ ಜಾಣನೊಬ್ಬ. ಹಂಗಾಯ್ತು ನಿಮ್ಮ ಕಥೆ. ನಿಮ್ಮದೇ ಪ್ರಶ್ನೆಗೆ ನಿಮಗೆ, ಕೊಟ್ಟ ಕುದುರೆ ಯಾಕೆ ಏರಿಲ್ಲ ಹೇಳಿ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ 11 ತಿಂಗಳಿಗೆ ಮುಖ್ಯಮಂತ್ರಿ ಸ್ಥಾನವನ್ನು ನಿಮ್ಮಿಂದ ಯಾಕೆ ಕಿತ್ತುಕೊಂಡರು? ಒಂದೇ ವರ್ಷಕ್ಕೆ ರೈಲ್ವೆ ಖಾತೆ ಯಾಕೆ ಕಿತ್ತುಕೊಂಂಡರು? 1 ವರ್ಷಕ್ಕೆ ಕಾನೂನು ಖಾತೆಯನ್ನು ನಿಮ್ಮಿಂದ ಯಾಕೆ ಕಿತ್ತುಕೊಂಂಡರು. ಮೊದಲು ಹುಟ್ಟೂರು ಪುತ್ತೂರು ಬಿಟ್ಟು, ನಂತರ ಉಡುಪಿ-ಚಿಕ್ಕಮಗಳೂರು ಬಿಟ್ಟು ಯಾಕೆ ಬೆಂಗಳೂರು ಸೇರಿಕೊಂಡಿರಿ ಎಂದು ಪ್ರಶ್ನೆಗಳ ಸುರಿಮಳೆ ಹಾಕಿದ್ದಾರೆ.

ಇದಕ್ಕೂ ಮುನ್ನ ಸಿದ್ದರಾಮಯ್ಯ ಅವರನ್ನು ಸರಣಿ ಟ್ವೀಟ್ ಮಾಡಿ ಪ್ರಶ್ನೆ ಮಾಡಿದ್ದ ಸದಾನಂದ ಗೌಡ ಅವರು, ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಡೆದದ್ದು 78 ಕ್ಷೇತ್ರ ಮಾತ್ರ, ನೀವು ಚಾಮುಂಡೇಶ್ವರಿಯಲ್ಲಿ ಸೋತು, ಬಾದಾಮಿಯಲ್ಲಿ ಕೆಲ ಮತಗಳಿಂದ ಗೆದ್ದಿದೀರಿ. ಸದ್ಯಕ್ಕೆ ನೀವು ಮುಖ್ಯಮಂತ್ರಿ ಅಲ್ಲ. ಎಚ್‍ಡಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದದ್ದು ನಿಮ್ಮ ಹೈಕಮಾಂಡ್ ದೆಸೆಯಿಂದ ಮಾತ್ರವೇ ಹೊರತು ನಿಮ್ಮಿಂದ ಅಲ್ಲ. ಇದು ನಿಮ್ಮ ಗಮನಕ್ಕೆ ಇರಲಿ ಎಂದು ತಿಳಿಸಿದ್ದರು.

ಮತ್ತೊಂದು ಟ್ವೀಟ್ ನಲ್ಲಿ, ನಿಮ್ಮ ಸ್ಥಾನ ಸದ್ಯ ಸಮನ್ವಯ ಸಮಿತಿಗೆ ಸೀಮಿತ. ಅದು ಕೂಡಾ ಅದು ಅಸ್ತಿತ್ವದಲ್ಲಿ ಇದ್ದರೆ ಸದ್ಯ ನೀವು ಉರುಳಿಸುತ್ತಿರುವ ರಾಜಕೀಯ ದಾಳ ಬಹಳ ಹಳೆಯದು. ಇನ್ನೊಬ್ಬರ ಮೇಲೆ ಆರೋಪ ಮಾಡುವ ಮುನ್ನ ಮುನ್ನ ಬೆನ್ನು ನೋಡಿ. ಮುಲಾಜಿನಲ್ಲಿ, ಹಗ್ಗದ ಮೇಲೆ ನಡೆಯುತ್ತಿರುವವರ ಕಾಲು ಎಳೆದು, ಮುಸಿ ಮುಸಿ ನಗಬೇಡಿ. ಸಾಲ ಮನ್ನಾ ಏನಾಯಿತೆಂದು ಸ್ವಲ್ಪ ವಿಚಾರಿಸಿ. ಬಳಿಕ ಆಡಳಿತ ಪಕ್ಷದಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನ ನಿಮಗೆ ಸಿಕ್ಕಿದ್ದರೆ ನಾಡಿನ ಜನತೆಗೂ ತಿಳಿಸಿ. ಕಳೆದ 7 ತಿಂಗಳ ರಾಜಕೀಯ ಬೆಳವಣಿಗೆಗಳು ನೀವು ಮರೆತಂತೆ ನಿಮ್ಮ ವರ್ತನೆ ಸದ್ಯಕ್ಕಿದೆ. ಹಾಗಾಗಿ ಮತ್ತೊಮ್ಮೆ ಜ್ಞಾಪಿಸೋಣ ಅಂದುಕೊಂಡೆ ಎಂದು ಬರೆದುಕೊಂಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *