ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ, ಕೊಲೆ ಪ್ರಕರಣಕ್ಕೆ ಟ್ವಿಸ್ಟ್

ಕೋಲಾರ: ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಂಜಿತ್ ಬಾಬು ಅಲಿಯಾಸ್ ಸುರೇಶ್ ಬಾಬುವನ್ನು ಶುಕ್ರವಾರ ಬಂಧಿಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕೊಲೆಯಾದ ವಿದ್ಯಾರ್ಥಿನಿ ಮನೆಯ ಬಳಿ ಗಾರೆ ಕೆಲಸ ಮಾಡಲು ಬರುತ್ತಿದ್ದ ಆರೋಪಿ ರಂಜಿತ್ ಬಾಬು, ಆಗಾಗ ಯುವತಿ ಮನೆ ಬಳಿ ಹೋಗಿ ಫಾಲೋ ಮಾಡಿ ನೀರು ಕೇಳಿದ್ದ, ಪ್ರೀತಿಸು ಅಂತಾ ಪ್ರಾಣ ತಿಂದಿದ್ದಾನೆ. ಆದ್ರೆ ಈತನ ಪ್ರೀತಿಗೆ ವಿದ್ಯಾರ್ಥಿನಿ ನಿರಾಕರಿಸಿದ ಹಿನ್ನೆಲೆಯಲ್ಲಿ ಜುಲೈ 1 ರಂದು ಶಾಲೆ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದ ವೇಳೆ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಾಗಿ ಬಲೆ ಬೀಸಿದ ಮಾಲೂರು ಪೊಲೀಸರು ಶುಕ್ರವಾರ ಸಂಜೆ ಟೇಕಲ್ ರೈಲ್ವೇ ನಿಲ್ದಾಣದಲ್ಲಿ ಆರೋಪಿ ರಂಜಿತ್ ಬಾಬುನನ್ನ ಬಂಧಿಸಿದ್ದಾರೆ. ಬಳಿಕ ಕೋಲಾರದ ಜೆಎಂಎಫ್ ಸಿ ನ್ಯಾಯಯಲಯದ ನ್ಯಾಯಾಧೀಶರ ಎದುರು ಬಿಗಿ ಪೊಲೀಸ್ ಬಂದೋ ಬಸ್ತ್‍ನಲ್ಲಿ ಕೊಲೆ ಅರೋಪಿ ಸುರೇಶ್ ಬಾಬು ಅಲಿಯಾಸ್ ರಂಜಿತ್ ಬಾಬುವನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಕೋಲಾರ ಜಿಲ್ಲೆ ಮಾಲೂರು ಪಟ್ಟಣದಲ್ಲಿ ಶಾಲಾ ವಿದ್ಯಾರ್ಥಿನಿಯ ಕೊಲೆ ಪ್ರಕರಣ ಇಡೀ ಕೋಲಾರ ಜಿಲ್ಲೆಯ ಜನರನ್ನು ಬೆಚ್ಚಿಬೀಳುವಂತೆ ಮಾಡಿತ್ತು. ಘಟನೆಯಿಂದ ಆತಂಕಗೊಂಡಿದ್ದ ಜಿಲ್ಲೆಯ ಜನರು, ಸಾವಿರಾರು ವಿದ್ಯಾರ್ಥಿಗಳು ಅಮಾಯಕ ವಿದ್ಯಾರ್ಥಿನಿಯನ್ನು ಕೊಂದ ಆರೋಪಿಯ ಬಂಧನಕ್ಕಾಗಿ ಆಗ್ರಹಿಸಿ ಬೃಹತ್ ಹೋರಾಟವನ್ನ ಮಾಡಿದ್ದರು. ಆರೋಪಿಯನ್ನು ಬಂಧಿಸುವವರೆಗೆ ಹೋರಾಟ ಕೈಬಿಡೋ ಮಾತೇ ಇಲ್ಲ ಎಂದು ಪಟ್ಟು ಹಿಡಿದಿದ್ದರು. ಈ ನಡುವೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಕೋಲಾರ ಎಸ್ಪಿ ರೋಹಿಣಿ ಕಠೋಚ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕೊಲೆ ಆರೋಪಿ ಗಾರೆ ಕೆಲಸ ಮಾಡುತ್ತಿದ್ದನು. ಈತನ ತಂದೆ ಕೂಲಿ ಕೆಲಸ ಮಾಡಿಕೊಂಡಿದ್ರೆ, ತಾಯಿ ಹೂವಿನ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದಾರೆ.

ಇಂತಹ ಘಟನೆ ಮರುಕಳಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು, ಮಾಲೂರು ಶಾಸಕ ಕೆ.ವೈ.ನಂಜೇಗೌಡ ನೇತೃತ್ವದಲ್ಲಿ ತಾಲೂಕು ಪಂಚಾಯ್ತಿ ಆರವರಣದಲ್ಲಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಪೊಲೀಸ್ ಅಧಿಕಾರಿಗಳು, ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರುಗಳು, ಕ್ಷೇತ್ರಶಿಕ್ಷಣಾಧಿಕಾರಿ ಸೇರಿದಂತೆ ಹಲವರು ಭಾಗವಹಿಸಿ ಮುಂದೆ ಇಂಥ ಘಟನೆ ನಡೆಯದಂತೆ ಸಭೆ ಸೇರಿ ಎಚ್ಚರಿಕೆ ಕ್ರಮಗಳಿಗೆ ಮುಂದಾದ್ರು.

ಶಾಲಾ ಕಾಲೇಜು ಬಿಡುವ ಆರಂಭದ ವೇಳೆ ಹಾಗೂ ಶಾಲೆ ಬಿಡುವ ಸಂದರ್ಭದಲ್ಲಿ ಹೆಚ್ಚಿನ ಬೀಟ್ ವ್ಯವಸ್ಥೆ ಮಾಡುವುದು, ಖಾಸಗಿ ಶಾಲೆಗಳು ಮಕ್ಕಳನ್ನು ಸುರಕ್ಷಿತವಾಗಿ ಮನೆಗೆ ಸೇರಿಸುವುದು ಹಾಗೂ ಶಾಲಾ ಕಾಲೇಜಿನಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಶಾಲಾ ಕಾಲೇಜು ಸುತ್ತಮುತ್ತ ವಿದ್ಯಾರ್ಥಿಗಳ ಮೇಲೆ ವಿಶೇಷ ನಿಗಾವಹಿಸುವಂತೆ ಸೂಚನೆ ನೀಡಲಾಯಿತು.

Comments

Leave a Reply

Your email address will not be published. Required fields are marked *