ನೇಣು ಬಿಗಿದುಕೊಂಡು ನಟಿ ಆತ್ಮಹತ್ಯೆ

ಮುಂಬೈ: ಬಾಲಿವುಡ್ ಕಿರುತೆರೆ ನಟಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈ ನಗರದಲ್ಲಿ ನಡೆದಿದೆ.

ನಟಿ ಸೆಜಲ್ ಶರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೆಜಲ್ ಶರ್ಮಾ ‘ದಿಲ್ ತೋ ಹ್ಯಾಪಿ ಹೈ ಜಿ’ ಧಾರಾವಾಹಿಯಲ್ಲಿ ಸಿಮ್ಮಿ ಖೋಸ್ಲಾ ಪಾತ್ರದ ಮೂಲಕ ಹೆಸರುವಾಸಿಯಾಗಿದ್ದರು. ಆದರೆ ಶುಕ್ರವಾರ ತಮ್ಮ ಮೀರಾ ರಸ್ತೆ ರೆಸಿಡೆನ್ಸಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ಮುಂಜಾನೆ ನಟಿ ಶರ್ಮಾಗೆ ತನ್ನ ರೂಮ್ ಮೇಟ್ ಫೋನ್ ಮಾಡಿದ್ದಾರೆ. ಆದರೆ ಫೋನ್ ರಿಸೀವ್ ಮಾಡಿರಲಿಲ್ಲ. ಹೀಗಾಗಿ ಆಕೆಯ ರೂಮ್‍ಮೆಟ್ ಬಾಗಿಲನ್ನು ತೆರೆದು ನೋಡಿದಾಗ ಶರ್ಮಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಿಯೇ ಶರ್ಮಾ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ರೂಮಿನಲ್ಲಿ ಡೆತ್‍ನೋಟ್ ಪತ್ತೆಯಾಗಿದ್ದು, ವೈಯಕ್ತಿಕ ಕಾರಣಗಳಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬರೆದಿದ್ದಾರೆ. ಸದ್ಯಕ್ಕೆ ಮೀರಾ ರಸ್ತೆ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಟಿ ಸೆಜಲ್ ಶರ್ಮಾ ಉದಯಪುರ ಮೂಲದವರಾಗಿದ್ದು, 2017 ರಲ್ಲಿ ಮುಂಬೈಗೆ ಬಂದು ನಟನಾ ವೃತ್ತಿಯನ್ನು ಮುಂದುವರಿಸಿದ್ದರು. ‘ ದಿಲ್ ತೋಹ್ ಹ್ಯಾಪಿ ಹೈ ಜಿ’ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಯಾಗಿದ್ದರು. ಶರ್ಮಾ ಅವರು ಕೆಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ವೆಬ್ ಸರಣಿಯಲ್ಲೂ ಅಭಿನಯಿಸಿದ್ದಾರೆ.

ನಿಜಕ್ಕೂ ಈ ಸುದ್ದಿ ಕೇಳಿ ನನಗೆ ಅಚ್ಚರಿಯಾಯಿತು. ನಾನು ಅವರನ್ನು 10 ದಿನಗಳ ಹಿಂದೆ ಭೇಟಿಯಾಗಿದ್ದೆ. ಅಲ್ಲದೇ ಭಾನುವಾರ ವಾಟ್ಸಪ್‍ನಲ್ಲಿ ಚಾಟ್ ಕೂಡ ಮಾಡಿದ್ದೆವು. ನಾನು 10 ದಿನಗಳ ಹಿಂದೆ ಅವರನ್ನು ಭೇಟಿಯಾದಾಗ ಶರ್ಮಾ ಚೆನ್ನಾಗಿದ್ದರು. ಆದರೆ ಇದ್ದಕ್ಕಿದಂತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಶರ್ಮಾರ ಸಹನಟ ದುಃಖದಿಂದ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *