ಏರೋಸ್ಪೇಸ್‌ ಕಚೇರಿ ದಾಳಿಗೆ ಪ್ರತೀಕಾರ – ಇರಾಕ್‌, ಸಿರಿಯಾದಲ್ಲಿರುವ ಉಗ್ರರ ನೆಲೆ ಮೇಲೆ ಟರ್ಕಿ ಏರ್‌ಸ್ಟ್ರೈಕ್‌

ಅಂಕಾರಾ: ಟರ್ಕಿಶ್ ಏರೋಸ್ಪೇಸ್ ಇಂಡಸ್ಟ್ರೀಸ್ (TUSAS) ಪ್ರಧಾನ ಕಚೇರಿ ಮೇಲೆ ದಾಳಿ (Terror Attack) ನಡೆಸಿದ್ದಕ್ಕೆ ಪ್ರತಿಯಾಗಿ ಟರ್ಕಿ ವಾಯುಪಡೆಯು ಬುಧವಾರ ಇರಾಕ್ (Iraq) ಮತ್ತು ಸಿರಿಯಾದಲ್ಲಿನ (Syria) ಕುರ್ದಿಶ್ ಉಗ್ರಗಾಮಿಗಳ ಮೇಲೆ ವಾಯು ದಾಳಿ (Airstrikes) ನಡೆಸಿದೆ.

ಈ ವೈಮಾನಿಕ ದಾಳಿಯಲ್ಲಿ 30ಕ್ಕೂ ಹೆಚ್ಚು ಗುರಿಗಳನ್ನು ನಾಶಗೊಳಿಸಲಾಗಿದೆ ಎಂದು ಟರ್ಕಿಯ (Turkey) ರಕ್ಷಣಾ ಸಚಿವಾಲಯ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದೆ.

ಕುರ್ದಿಶ್ ಉಗ್ರಗಾಮಿಗಳು (Kurdish Militants) ಏರೋಸ್ಪೇಸ್ ಕಚೇರಿ ಮೇಲೆ ದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ಈ ದಾಳಿ ನಡೆದಿರುವುದು ವಿಶೇಷ. ರಕ್ಷಣಾ ಕಂಪನಿಯ ಮೇಲಿನ ದಾಳಿಯ ಹಿಂದೆ ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿ ಅಥವಾ ಪಿಕೆಕೆ ಕೈವಾಡವಿದೆ ಟರ್ಕಿ ರಕ್ಷಣಾ ಸಚಿವ ಯಾಸರ್ ಗುಲೇರ್ ಹೇಳಿದ್ದಾರೆ.

ಇರಾಕ್‌ನಲ್ಲಿ ನೆಲೆ ಹೊಂದಿರುವ ಪಿಕೆಕೆ ಮತ್ತು ಸಿರಿಯಾದಲ್ಲಿರುವ ಕುರ್ದಿಶ್‌ ಉಗ್ರರ ಮೇಲೆ ಟರ್ಕಿ ನಿಯಮಿತವಾಗಿ ವಾಯುದಾಳಿಗಳನ್ನು ನಡೆಸಿಕೊಂಡೇ ಬಂದಿದೆ. ಕೊನೆಯ ಉಗ್ರನನ್ನು ನಿರ್ಮೂಲನೆ ಮಾಡುವರೆಗೂ ನಾವು ದಾಳಿ ನಡೆಸುತ್ತೇವೆ ಎಂದು ಗುಲೇರ್ ತಿಳಿಸಿದ್ದಾರೆ. ಇದನ್ನೂ ಓದಿ: ಬೈರೂತ್‌ ಮೇಲೆ ಇಸ್ರೇಲ್‌ ಮತ್ತೊಂದು ದಾಳಿ; ಮೂರೇ ಸೆಕೆಂಡುಗಳಲ್ಲಿ ದೈತ್ಯ ಕಟ್ಟಡಗಳು ಧ್ವಂಸ

ಬ್ರಿಕ್ಸ್‌ ಸಭೆಯಲ್ಲಿ ಭಾಗಿಯಾಗಿರುವ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್, ನಾನು ಈ ಭೀಕರ ಭಯೋತ್ಪಾದಕ ದಾಳಿಯನ್ನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ.

TUSAS ಸಂಸ್ಥೆ ನಾಗರಿಕ ಮತ್ತು ಮಿಲಿಟರಿ ವಿಮಾನಗಳು, ಮಾನವರಹಿತ ವೈಮಾನಿಕ ವಾಹನಗಳು, ರಕ್ಷಣಾ ಉಪಕರಣಗಳನ್ನು ಅಭಿವೃದ್ಧಿಪಡಿಸಿ ಜೋಡಿಸುತ್ತದೆ. ಕುರ್ದಿಶ್ ಉಗ್ರಗಾಮಿಗಳ ವಿರುದ್ಧದ ಹೋರಾಟದಲ್ಲಿ ಟರ್ಕಿ ಮೇಲುಗೈ ಸಾಧಿಸುವಲ್ಲಿ ಅದರ UAV ಗಳು ಪ್ರಮುಖ ಪಾತ್ರವಹಿಸಿದ್ದು ಸುಮಾರು 10 ಸಾವಿರ ಮಂದಿ ಉದ್ಯೋಗ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಇಬ್ಬರು ಉಗ್ರರು ಈ ಸಂಸ್ಥೆಯ ಮೇಲೆ ದಾಳಿ ನಡೆಸಿದ್ದಾರೆ.

 

1980 ರ ದಶಕದಿಂದಲೂ ಕುರ್ದಿಶ್‌ಗಳು ಆಗ್ನೇಯ ಟರ್ಕಿಯಲ್ಲಿ ಪ್ರತ್ಯೇಕ ರಾಷ್ಟ್ರಕ್ಕಾಗಿ ಹೋರಾಡುತ್ತಿದ್ದಾರೆ. ಇದನ್ನು ಟರ್ಕಿ ಮತ್ತು ಅದರ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಇದನ್ನು ಉಗ್ರ ಸಂಘಟನೆ ಎಂದು ಕರೆದಿವೆ.

 


ಬುಧವಾರ ಶಸ್ತ್ರಸಜ್ಜಿತರಾಗಿ ಓರ್ವ ಪುರುಷ, ಮಹಿಳೆ TUSAS ಕಾಂಪ್ಲೆಕ್ಸ್‌ಗೆ ಆಗಮಿಸಿ ಮನಸ್ಸಿಗೆ ಬಂದಂತೆ ಗುಂಡು ಹಾರಿಸಿದ್ದಾರೆ. ಈ ಘಟನೆಯಲ್ಲಿ 5 ಮಂದಿ ಸಾವನ್ನಪ್ಪಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕೊನೆಗೆ ಭದ್ರತಾ ಪಡೆ ಇಬ್ಬರು ಹತ್ಯೆ ಮಾಡಿದ್ದಾರೆ.