ತುಂಗಭದ್ರಾ ಡ್ಯಾಂ ತುಂಬ್ತಿದ್ರೂ ರೈತರ ಮೊಗದಲ್ಲಿಲ್ಲ ಮಂದಹಾಸ!

ಬಳ್ಳಾರಿ: ಜಿಲ್ಲೆಯ ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯವು ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಯ ಜೀವನಾಡಿಯಾಗಿದೆ. ಆದ್ರೆ ಈ ಜಲಾಶಯಕ್ಕೆ ಭಾರೀ ಪ್ರಮಾಣದ ನೀರು ಹರಿದು ಬಂದರೂ ಗಣಿ ನಾಡಿನ ರೈತರ ಮೊಗದಲ್ಲಿ ಮಾತ್ರ ಮಂದಹಾಸ ಮೂಡಿಲ್ಲ.

ಮಲೆನಾಡು ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿರುವ ಪರಿಣಾಮ ಕಳೆದ ಒಂದು ತಿಂಗಳಿನಲ್ಲಿ 20 ಟಿಎಂಸಿಗೂ ಹೆಚ್ಚು ನೀರು ಹರಿದುಬಂದ ಪರಿಣಾಮ ಸಧ್ಯ ಡ್ಯಾಂನಲ್ಲೀಗ ಬರೋಬ್ಬರಿ 26 ಟಿಎಂಸಿ ನೀರು ಸಂಗ್ರಹವಾಗಿದೆ. ಹೀಗಾಗಿ ಈ ಬಾರಿ ಎರಡು ಬೆಳೆಗಳಿಗೆ ನೀರುಣುಸಿ ಅಂತಾ ರೈತರು ಸರ್ಕಾರಕ್ಕೆ ಮನವಿ ಮಾಡ್ಕೊಂಡಿದ್ದಾರೆ. ಆದ್ರೆ ರೈತರ ಜಮೀನಿಗೆ ನೀರು ಬಿಡೋ ಬಗ್ಗೆ ನಿರ್ಧರಿಸಬೇಕಿದ್ದ ನೀರಾವರಿ ಸಲಹಾ ಸಮಿತಿ ಇನ್ನೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗದ ಕಾರಣ ಇದುವರೆಗೂ ಸಭೆ ನಡೆಸಿಲ್ಲ.


ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವ ಪರಿಣಾಮ ಡ್ಯಾಂ ತುಂಬುವ ನಿರೀಕ್ಷೆಯಲ್ಲಿರುವ ರೈತರು ಈ ಭಾರಿಯಾದ್ರೂ ಎರಡು ಬೆಳೆಗಳಿಗೆ ನೀರುಣುಸಿ ಅಂತಾ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.

ತುಂಗಭದ್ರಾ ಜಲಾಶಯಕ್ಕೆ 26 ವರ್ಷಗಳ ನಂತರ ದಾಖಲೆ ಪ್ರಮಾಣದ ನೀರು ಹರಿದುಬಂದಿದೆ. ಹೀಗಾಗಿ ಡ್ಯಾಂ ತುಂಬುವ ನಿರೀಕ್ಷೆಯಲ್ಲಿರುವ ಮೂರು ಜಿಲ್ಲೆಗಳ ರೈತರು ಈ ಭಾರಿಯಾದ್ರೂ ಎರಡು ಬೆಳೆಗಳಿಗೆ ನೀರು ಕೊಡಿ ಅಂತಿದ್ದಾರೆ. ಅಲ್ಲದೇ ಕಳೆದ 3-4 ವರ್ಷಗಳಿಂದ ಒಂದೇ ಬೆಳೆಗೆ ಆನ್ & ಆಪ್ ಪದ್ಧತಿಯಲ್ಲಿ ನೀರು ಪಡೆಯುತ್ತಿರುವ ರೈತರ ನೆರವಿಗೆ ಸರ್ಕಾರ ಮುಂದಾಗಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ.

ಸಮಿಶ್ರ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರುಗಳೇ ನೇಮಕವಾಗದ ಪರಿಣಾಮ ನೀರಾವರಿ ಸಲಹಾ ಸಮಿತಿ ಸಭೆ ಕರೆಯಲು ಸಚಿವರೇ ಇಲ್ಲದಾಗಿರುವುದು ದುರಂತವಾಗಿದೆ. ಹೀಗಾಗಿ ಎರಡು ಬೆಳೆಗಳಿಗೆ ನೀರು ಹರಿಸುವ ಬಗ್ಗೆ ಕೂಡಲೇ ಸಲಹಾ ಸಮಿತಿ ಸಭೆ ಕರೆದು ನೀರು ಬಿಡುವ ಬಗ್ಗೆ ನಿರ್ಧರಿಸಬೇಕು ಅಂತ ಅನ್ನದಾತರು ಹೇಳುತ್ತಿದ್ದಾರೆ.

ಕಳೆದ ಮೂರು ನಾಲ್ಕು ವರ್ಷಗಳಿಂದ ಡ್ಯಾಂ ತುಂಬದ ಪರಿಣಾಮ ರೈತರು ಒಂದೇ ಬೆಳೆಯಲು ನೀರಿಲ್ಲದೆ ಸಾಕಷ್ಟು ನಷ್ಟ ಅನುಭವಿಸಿದ್ದಾರೆ, ಹೀಗಾಗಿ ಈ ಬಾರಿಯಾದ್ರೂ ಪವರ್ ಮಿನಿಷ್ಟರ್ ಅನ್ನಿಸಿಕೊಂಡಿರುವ ಡಿಕೆ ಶಿವಕುಮಾರರಾದ್ರೂ ಟಿಬಿ ಡ್ಯಾಂನಿಂದ ರೈತರಿಗೆ ಎರಡು ಬೆಳೆಗಳಿಗೆ ನೀರು ಹರಿಸ್ತಾರಾ ಅಂತಾ ಮೂರು ಜಿಲ್ಲೆಗಳ ರೈತರು ಜಾತಕಪಕ್ಷಿಯಂತೆ ಕಾಯುತ್ತಿದ್ದಾರೆ.

Comments

Leave a Reply

Your email address will not be published. Required fields are marked *