‘ನಮ್ಮನ್ನು ಬದುಕಲು ಬಿಡಿ’- ನಿರ್ದೇಶಕನ ಜೊತೆ ಓಡಿಹೋಗಿದ್ದ ನಟಿ ರಾಯಚೂರಿನಲ್ಲಿ ಪ್ರತ್ಯಕ್ಷ

ರಾಯಚೂರು: ನಿರ್ಮಾಪಕರಿಂದ ಹಣ ಪಡೆದು ಪರಾರಿಯಾಗಿದ್ದಾರೆ ಎನ್ನಲಾಗಿದ್ದ ತುಂಗಭದ್ರಾ ಸಿನಿಮಾ ನಟಿ ವಿಜಯಲಕ್ಷ್ಮಿ ರಾಯಚೂರಿನಲ್ಲಿ ಗಂಡನ ಜೊತೆ ಪ್ರತ್ಯಕ್ಷವಾಗಿದ್ದಾರೆ. ನಿರ್ದೇಶಕ ಆಂಜಿನಯ್ಯ ಅವರನ್ನು ಲವ್ ಮಾಡಿ ಮದುವೆ ಆಗಿದ್ದೇನೆ. ನಾನು ಯಾವ ನಿರ್ಮಾಪಕರ ಬಳಿಯೂ ಹಣ ಪಡೆದು ಪರಾರಿಯಾಗಿಲ್ಲ ಎಂದು ವಿಜಯಲಕ್ಷ್ಮಿ ತಿಳಿಸಿದ್ದಾರೆ.

ನಾನು ತುಂಗಭದ್ರಾ ಸಿನಿಮಾದಲ್ಲಿ ನಟಿಸುವಾಗ ಲವ್ ಮಾಡಿ ಮದುವೆ ಆಗಿದ್ದೇನೆ. ನನ್ನನ್ನು ಯಾರೂ ಕರೆದುಕೊಂಡು ಬಂದಿಲ್ಲ. ನಾನು ಪ್ರೀತಿಸಿ ಮದುವೆ ಆಗಿದ್ದೇನೆ. ನಮ್ಮ ಅಜ್ಜಿ ಸಾವನ್ನಪ್ಪಿಲ್ಲ, ನಮ್ಮ ತಾಯಿ ನಾಟಕ ಮಾಡುತ್ತಿದ್ದಾರೆ. ನಾವು ಗಂಗಾವತಿಯಲ್ಲಿ ಮದುವೆ ಆಗಿದ್ದೇವೆ. ನನ್ನ ತಾಯಿ ಸವಿತಾ ನಾಟಕ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ನನ್ನ ತಾಯಿ ಮೊದಲು ಹೀಗೆ ವಿಷ ಸೇವಿಸಿ ನಾಟಕ ಮಾಡಿದ್ದರು. ಈಗಲೂ ಅವರಿಗೆ ನಾನು ಮದುವೆ ಆಗಿದ್ದು ಇಷ್ಟವಿಲ್ಲ. ಹೀಗಾಗಿ ನಾಟಕ ಮಾಡುತ್ತಿದ್ದಾರೆ. ನನ್ನ ತಂದೆ-ತಾಯಿ ಬೇರೆಯಾಗಿ 6 ವರ್ಷಗಳು ಕಳೆದಿದೆ. ನನ್ನ ತಾಯಿ ಮತ್ತು ನನ್ನ ಸಾಕು ತಂದೆ ನನಗೆ ಕಿರುಕುಳ ನೀಡಿದ್ದಾರೆ. ನನಗೆ ಚಿತ್ರ-ವಿಚಿತ್ರ ಹಿಂಸೆ ನೀಡಿದ್ದಾರೆ. ಕೈಗೆ, ತೊಡೆಗೆ ಮತ್ತು ಬೆನ್ನಿಗೆ ನನ್ನ ಸಾಕು ತಂದೆ ಹಲ್ಲೆ ಮಾಡಿದ್ದಾರೆ. ನಾನು ಮದುವೆ ಆಗಿರುವ ವಿಷಯ ತಿಳಿದು ನನ್ನ ಗಂಡನನ್ನು ಸಾಯಿಸಲು ಪ್ಲಾನ್ ಮಾಡಿದ್ದರು ಎಂದು ವಿಜಯಲಕ್ಷ್ಮಿ ದೂರಿದ್ದಾರೆ.

ಮನೆಯಲ್ಲಿ ಖಾರದ ಪುಡಿ, ಮಚ್ಚು ಮತ್ತು ಬಾಟಲ್‍ಗಳ ಸಮೇತ ರೆಡಿಯಾಗಿದ್ದರು. ಆದರೆ ನಾನು ನನ್ನ ಗಂಡನನ್ನು ಬಿಟ್ಟು ಅಮ್ಮನಿಗೆ ಕಾಯಿಲೆ ಎಂದು ಒಬ್ಬಳೇ ಹೋಗಿದ್ದೆ. ಆಗ ನನ್ನ ತಾಯಿ ನಾಟಕ ಮಾಡಿದ್ದರು. ಈಗಲೂ ಅಮ್ಮ ಮತ್ತು ಮಹಾದೇವ ಸ್ವಾಮಿ ನಾಟಕ ಮಾಡುತ್ತಿದ್ದಾರೆ ಅಂತ ವಿಜಯಲಕ್ಷ್ಮಿ ಕಿಡಿಕಾರಿದರು.

ನಾವು ಬರುವಾಗ ಯಾರ ಬಳಿಯೂ ಹಣ ಆಗಲಿ, ಚಿನ್ನವಾಗಲಿ, ಒಡವೆಯಾಗಲಿ ಪಡೆದು ತಂದಿಲ್ಲ. ನಮ್ಮ ಮೇಲೆ ಸಾಕು ತಂದೆ ಮಾಡುತ್ತಿರುವ ಎಲ್ಲಾ ಆರೋಪ ಸುಳ್ಳು. ನನ್ನ ತಾಯಿಗೆ ಹಾಗೂ ಸಾಕು ತಂದೆಗೆ ಬರೀ ದುಡ್ಡು ಬೇಕು. ನಾನು ಪ್ರೀತಿ ಮಾಡಿ ಮದುವೆ ಆಗಿದ್ದೇನೆ. ನಾನು ಅವರು ಹೇಳಿದಂತೆ ಕೇಳಿಲ್ಲ. ಅದಕ್ಕೆ ನನ್ನ ಗಂಡನ ಮನೆಗೂ ಬಂದು ನಮಗೆ ಕಿರುಕುಳ ನೀಡುತ್ತಿದ್ದಾರೆ.

ರಾಯಚೂರಿನ ಸಿರವಾರದ ಹಳ್ಳಿಹೊಸುರು ನನ್ನ ಗಂಡನ ಮನೆ. ಹೀಗಾಗಿ ರಾಯಚೂರು ಎಸ್‍ಪಿ ಡಾ. ಸಿ.ಬಿ ವೇದಮೂರ್ತಿಯವರನ್ನು ಭೇಟಿ ಮಾಡಿ ರಕ್ಷಣೆಗಾಗಿ ಮನವಿ ಮಾಡಿದ್ದೇವೆ. ನಮ್ಮನ್ನು ಬದುಕಲು ಬಿಡಿ, ನಾವು ಮುಂದಿನ ದಿನಗಳಲ್ಲಿ ಸಿನಿಮಾ ಮಾಡುತ್ತೇವೆ ಅಂತ ವಿಜಯಲಕ್ಷ್ಮಿ ಹಾಗೂ ಆಂಜಿನಯ್ಯ ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *