– ಅನ್ನ ನೀರು ಕೊಡದೇ ಕಂಟೈನರ್ ನಲ್ಲಿ ಕೂಡಿಟ್ಟು ಚಿತ್ರ ಹಿಂಸೆ
ತುಮಕೂರು: ಕಂಟೈನರ್ ಆಕ್ಸಿಡೆಂಟ್ ಮಾಡಿದ್ದಕ್ಕೆ ಮಾಲೀಕನೊಬ್ಬ ಇಬ್ಬರು ಚಾಲಕರಿಗೆ ಚಿತ್ರಹಿಂಸೆ ನೀಡಿ, ಓರ್ವನನ್ನು ಕೊಲೆಗೈದ ಘಟನೆ ಜಿಲ್ಲೆಯ ಶಿರಾ ತಾಲೂಕಿನಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆ ಬೈಲಹೊಂಗಲದ ಬಸಪ್ಪ(38) ಚಿತ್ರಹಿಂಸೆಗೆ ಬಲಿಯಾದ ಚಾಲಕ. ಮತ್ತೊಬ್ಬ ಚಾಲಕ ಸೋಮಪ್ಪ(35) ಅಸ್ವಸ್ಥಗೊಂಡಿದ್ದಾನೆ. ಕಂಟೈನರ್ ಲಾರಿ ಮಾಲೀಕ ಬಾಳಪ್ಪ ಹಾಗೂ ಆತನ ಸಹಚರರು ಸೇರಿ ಕೃತ್ಯ ಎಸಗಿದ್ದಾರೆ ಆರೋಪಿಸಿ ಬಸಪ್ಪನ ಪತ್ನಿ ಮತ್ತು ಹಲ್ಲೆಗೆ ಒಳಗಾದ ಸೋಮಪ್ಪ ಶಿರಾ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡು ಅಸ್ವಸ್ಥಗೊಂಡಿರುವ ಸೋಮಪ್ಪ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ದೂರಿನಲ್ಲಿರುವ ಆರೋಪ ಏನು?
ಕಂಟೈನರ್ ಮಾಲೀಕ ಬಾಳಪ್ಪ ಕೂಡ ಬೈಲಹೊಂಗಲದ ನಿವಾಸಿಯಾಗಿದ್ದು ಅದೇ ಪಟ್ಟಣದ ನಿವಾಸಿಗಳಾದ ಬಸಪ್ಪ ಹಾಗೂ ಸೋಮಪ್ಪ ಅವರನ್ನು ಚಾಲಕರನ್ನಾಗಿ ನೇಮಿಸಿದ್ದ. ಕಂಟೈನರ್ ಡಿಸೆಂಬರ್ 11ರಂದು ಶಿರಾ ತಾಲೂಕಿನಲ್ಲಿ ಲಾರಿಯೊಂದಕ್ಕೆ ಡಿಕ್ಕಿ ಹೊಡೆದು ಜಖಂಗೊಂಡಿತ್ತು.
ಈ ಕುರಿತು ಮಾಹಿತಿ ಪಡೆದ ಬಾಳಪ್ಪ ಘಟನಾ ಸ್ಥಳಕ್ಕೆ ಬಂದಿದ್ದ. ಈ ವೇಳೆ ಚಾಲಕರ ಮೇಲೆ ಕೋಪಗೊಂಡು ತನ್ನ ಸಹಚರರ ಜೊತೆಗೆ ಸೇರಿ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಬಳಿಕ ರಸ್ತೆ ಪಕ್ಕದಲ್ಲಿ ನಿಂತಿದ್ದ ಕಂಟೈನರ್ ನಲ್ಲಿ ಮೂರು ದಿನಗಳ ಕಾಲ ಅನ್ನ, ನೀರು ಕೊಡದೆ ಕೂಡಿ ಹಾಕಿದ್ದ. ಇಬ್ಬರನ್ನೂ ದೊಣ್ಣೆಯಿಂದ ಮನಬಂದಂತೆ ಥಳಿಸಿದ್ದ ಬಾಳಪ್ಪ, ಬಸಪ್ಪನನ್ನು ಕಾಲಿನಿಂದ ಒದ್ದು ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದ್ದಾನೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply