ಮಸಾಲೆ ಜಯರಾಂ ಹುಟ್ಟುಹಬ್ಬ ಆಚರಣೆ – ಮೂವರ ವಿರುದ್ಧ ಎಫ್‍ಐಆರ್

ತುಮಕೂರು: ಲಾಕ್‍ಡೌನ್ ನಡುವೆಯೂ ಶುಕ್ರವಾರ ತುರುವೇಕೆರೆ ಶಾಸಕ ಮಸಾಲಾ ಜಯರಾಂ ಅವರ ಹುಟ್ಟು ಹಬ್ಬವನ್ನು ಆಚರಿಸಿದ ಮೂವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ಮಸಾಲೆ ಜಯರಾಂ ಅವರ ಬೆಂಬಲಿಗರಾದ ಗುಬ್ಬಿ ತಾಲೂಕು ಇಡಗೂರಿನ ರವಿ, ರಾಜೇನಹಳ್ಳಿಯ ವಸಂತಕುಮಾರ್ ಹಾಗೂ ಹೊನ್ನೇಗೌಡರ ಮೇಲೆ ಎಫ್‍ಐಆರ್ ದಾಖಲಾಗಿದೆ. ಲಾಕ್‍ಡೌನ್ ನಡುವೆ ಜನರನ್ನು ಸೇರಿಸಿ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಗುಂಪು ಸೇರಿದ್ದ ಹಿನ್ನೆಲೆಯಲ್ಲಿ ಸಿಎಸ್ ಪುರ ಠಾಣೆಯ ಮುಖ್ಯ ಪೇದೆ ನವೀನ್ ನೀಡಿರುವ ದೂರಿನನ್ವಯ ಪ್ರಕರಣ ದಾಖಲಾಗಿದೆ.

ಶುಕ್ರವಾರ ಇಡಗೂರಿನಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿದ್ದ ಈ ಮೂವರು ವ್ಯಕ್ತಿಗಳು, ಹುಟ್ಟುಹಬ್ಬ ಆಚರಣೆ ವೇಳೆ ಸಾಮಾಜಿಕ ಅಂತರ ಕಾಪಾಡದೇ ನಿಯಮ ಉಲ್ಲಂಘಸಿ ಜನರ ಗುಂಪು ಸೇರಿಸಿದ್ದರು. ಶಾಸಕ ಮಸಾಲೆ ಜಯರಾಂ ಸಾಮಾಜಿಕ ಅಂತರ ಮರೆತು, ಮಾಸ್ಕ್ ಸಹ ಹಾಕಿಕೊಳ್ಳದೇ ಬೇಜವಾಬ್ದಾರಿತನ ಮೆರೆದಿದ್ದರು. ಅಷ್ಟೇ ಅಲ್ಲದೆ ಹುಟ್ಟುಹಬ್ಬ ನಿಮಿತ್ತ ಜನರಿಗೆ ಬಿರಿಯಾನಿ ಊಟ ಹಾಕಿಸಿದ್ದರು. ಹೀಗಾಗಿ ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಜನರು ಸೇರಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದರು.

ಕೊರೊನಾ ಭೀತಿಯಿಂದ ಲಾಕ್‍ಡೌನ್ ಘೋಷಣೆ ಆಗಿರುವ ಹೊತ್ತಿನಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡು ಬಂಡತನ ಪ್ರದರ್ಶನ ತೋರಿಸದ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಈಗ ಮೂವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

Comments

Leave a Reply

Your email address will not be published. Required fields are marked *