ಬೋನಿನಲ್ಲಿದ್ದ ಚಿರತೆ ಜೊತೆ ಚೇಷ್ಟೆ ಮಾಡಲು ಹೋಗಿ ಆಸ್ಪತ್ರೆ ಸೇರಿದ!

ತುಮಕೂರು: ಬೋನಿಗೆ ಬಿದ್ದ ಚಿರತೆ ಜೊತೆ ಚೇಷ್ಟೆ ಮಾಡಲು ಹೋಗಿ ವ್ಯಕ್ತಿಯೋರ್ವ ಮುಖ ಕೈ ಪರಚಿಸಿಕೊಂಡ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹೊನ್ನವಳ್ಳಿಯ ಮಂಜುನಾಥ್ ನಗರದಲ್ಲಿ ನಡೆದಿದೆ.

ಚಿರತೆ ಸಹವಾಸಕ್ಕೆ ಹೋಗಿ ಆಸ್ಪತ್ರೆ ಸೇರಿದ ವ್ಯಕ್ತಿಯನ್ನು ದಾಸನಕಟ್ಟೆ ಗ್ರಾಮದ ನಿವಾಸಿ ರಮೇಶ್ (45) ಎಂದು ಗುರುತಿಸಲಾಗಿದೆ. ಆಹಾರವನ್ನು ಅರಸಿ ಕಾಡಿನಿಂದ ನಾಡಿಗೆ ಬಂದ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಬೋನು ಹಾಕಿದ್ದು, ಈ ಬೋನಿಗೆ ಬಿದ್ದಿದ್ದ ಚಿರತೆಯ ಜೊತೆ ಚೇಷ್ಟೆ ಮಾಡಲು ಹೋಗಿ ಮುಖ ಕೈಗಳನ್ನು ಗಾಯ ಮಾಡಿಕೊಂಡು ರಮೇಶ್ ಆಸ್ಪತ್ರೆ ಸೇರಿದ್ದಾನೆ.

ಬೋನಿನ ಒಳಗೆ ಇದ್ದ ಚಿರತೆಯ ಮೇಲೆ ಹೊರಗಡೆಯಿಂದ ಕಡ್ಡಿಯಿಂದ ತಿವಿದು ರಮೇಶ್ ಚೇಷ್ಟೆ ಮಾಡಿದ್ದಾನೆ. ಇದರಿಂದ ಕೋಪಗೊಂಡ ಚಿರತೆ ಕಡ್ಡಿ ಸಮೇತ ರಮೇಶ್‍ನನ್ನು ಬೋನಿನ ಬಳಿ ಎಳೆದುಕೊಂಡು ಕೈ ಮುಖವನ್ನು ಪರಚಿ ಹಾಕಿದೆ. ಆಗ ಅಲ್ಲೇ ಇದ್ದ ಸ್ಥಳೀಯರು ರಮೇಶ್‍ನನ್ನು ಚಿರತೆಯಿಂದ ರಕ್ಷಿಸಿದ್ದಾರೆ. ನಂತರ ಅರಣ್ಯ ಇಲಾಖೆ ಸಿಬ್ಬಂದಿ ರಮೇಶ್ ಗೆ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

Comments

Leave a Reply

Your email address will not be published. Required fields are marked *