ತುಮಕೂರು: ಕೆರೆಯಲ್ಲಿ ಈಜಲು ಹೋದ ಮೂವರು ವಿದ್ಯಾರ್ಥಿಗಳು ಮುಳುಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಗುಬ್ಬಿಯಲ್ಲಿ ನಡೆದಿದೆ.
ನಗರದ ಎಸ್‍ಸಿ, ಎಸ್‍ಟಿ ಹಾಸ್ಟೆಲ್‍ನ ಶ್ರೀನಿವಾಸ್, ದರ್ಶನ್ ಮತ್ತು ನಂದನ್ ಮೃತ ವಿದ್ಯಾರ್ಥಿಗಳು. ಹಾಸ್ಟೇಲ್‍ನಲ್ಲಿದ್ದು ವಿವಿಧ ಶಾಲೆಗಳಲ್ಲಿ ಓದುತ್ತಿದ್ದ 5 ಜನ ವಿದ್ಯಾರ್ಥಿಗಳು ಈಜಲು ಹೋಗಿದ್ದರು. ಅದರಲ್ಲಿ ಮೂರುಜನ ಸಾವನ್ನಪ್ಪಿದ್ದಾರೆ. ಇಂದು ಮಧ್ಯಾಹ್ನ ಹಾಸ್ಟೆಲ್‍ಗೆ ಊಟಕ್ಕೆಂದು ಬಂದಿದ್ದ ಅವರು ಊಟವನ್ನು ಮುಗಿಸಿ ಶಾಲೆಗೆ ಹೋಗದೆ ಗುಬ್ಬಿ ಕೆರೆಗೆ ಈಜಲು ಹೋಗಿದ್ದಾರೆ. ಅದರಲ್ಲಿ ಇಬ್ಬರು ತಮಗೆ ಈಜು ಬರುವುದಿಲ್ಲವೆಂದು ವಾಪಸ್ ಬಂದಿದ್ದಾರೆ.

ಉಳಿದ ಮೂರು ಜನರು ಕೆರೆ ಕೋಡಿಯಲ್ಲಿ ಈಜಾಡುತ್ತಾ ಮುಂದೆ ಹೋಗಿದ್ದಾರೆ. ಕೆರೆ ಹೂಳು ತೆಗೆದಿದ್ದು ಹಾಗೂ ಆಳವಾದ ಗುಂಡಿಗಳನ್ನು ಗಮನಿಸದೆ ಮುಂದೆ ಹೋಗಿದ್ದರಿಂದ ವಾಪಸ್ ಬರುವುದಕ್ಕೆ ಸಾಧ್ಯವಾಗದೆ ಇಬ್ಬರು ಮುಳುಗಿದ್ದಾರೆ. ಇದನ್ನು ಕಂಡ ಮತ್ತೊಬ್ಬ ಅವರನ್ನು ರಕ್ಷಿಸಲು ಹೋಗಿ ಆತನು ಮುಳುಗಿದ್ದಾನೆ.
ಘಟನಾ ಸ್ಥಳಕ್ಕೆ ಗುಬ್ಬಿ ತಹಶೀಲ್ದಾರ್ ಮಮತಾ, ಸಮಾಜ ಕಲ್ಯಾಣ ಇಲಾಖೆಯ ರಾಮಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗುಬ್ಬಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply