ಬ್ಯಾಂಕ್ ಗೇಟ್ ಮುರಿದು ಜಪ್ತಿಯಾದ ಟ್ರ್ಯಾಕ್ಟರ್ ವಾಪಸ್ ತೆಗೆದುಕೊಂಡು ಹೋದ ರೈತರು

ತುಮಕೂರು: ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಬ್ಯಾಂಕ್ ಅಧಿಕಾರಿಗಳು ಜಪ್ತಿ ಮಾಡಿದ್ದ ಟ್ರ್ಯಾಕ್ಟರ್ ಅನ್ನ ರೈತರು ಬ್ಯಾಂಕ್ ಗೇಟನ್ನು ಮುರಿದು ವಾಪಸ್ ತೆಗೆದುಕೊಂಡು ಹೋದ ಘಟನೆ ತುಮಕೂರು ನಗರದ ಭದ್ರಮ್ಮ ವೃತ್ತದಲ್ಲಿರುವ ಪಿ.ಎಲ್.ಡಿ ಬ್ಯಾಂಕಿನಲ್ಲಿ ನಡೆದಿದೆ.

ಚಿಕ್ಕನಾಯಕನಹಳ್ಳಿ ತಾಲೂಕಿನ ರೈತ ರಂಗನಾಥ್ ಎಂಬವರ ಟ್ರ್ಯಾಕ್ಟರ್ ಸೇರಿದಂತೆ ಒಟ್ಟು ನಾಲ್ಕು ರೈತರ ಟ್ರ್ಯಾಕ್ಟರ್ ಅನ್ನು ಅಧಿಕಾರಿಗಳು ಜಪ್ತಿ ಮಾಡಿದ್ದರು. ತಮಗೆ ಯಾವುದೇ ನೋಟಿಸ್ ನೀಡದೆ ಟ್ರ್ಯಾಕ್ಟರ್ ಜಪ್ತಿ ಮಾಡಿದ್ದಾರೆ ಎಂದು ಆರೋಪಿಸಿದ ರೈತರು, ರೈತ ಸಂಘದ ಮುಖಂಡರೊಂದಿಗೆ ಬಂದು ಪಿ.ಎಲ್.ಡಿ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದ್ದಾರೆ.

ಅಲ್ಲದೆ ಬೀಗ ಹಾಕಿದ್ದ ಬ್ಯಾಂಕಿನ ಗೇಟ್ ಮುರಿದು ಜಪ್ತಿಯಾದ ಟ್ರ್ಯಾಕ್ಟರನ್ನು ವಾಪಸ್ ತೆಗೆದುಕೊಂಡು ಹೋಗಿದ್ದಾರೆ. ಬ್ಯಾಂಕ್ ಎದುರು ಸುಮಾರು ಅರ್ಧಗಂಟೆಗಳ ಕಾಲ ಪ್ರತಿಭಟನೆ ನಡೆಸಿದ ರೈತರು, ಬ್ಯಾಂಕ್ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ್ದಾರೆ. ಜಿಲ್ಲೆಯಲ್ಲಿ ಬರಗಾಲ ಇದ್ದು ರೈತರಿಗೆ ಸಾಲ ಕಟ್ಟಲು ಕಷ್ಟವಾಗುತ್ತಿದೆ. ಈ ನಡುವೆ ರೈತರ ಕೃಷಿ ಉಪಕರಣಗಳನ್ನು ಜಪ್ತಿ ಮಾಡಿದ್ದು ತಪ್ಪು ಎಂದು ಅಧಿಕಾರಿಗಳ ಧೋರಣೆ ಖಂಡಿಸಿದ್ದಾರೆ.

Comments

Leave a Reply

Your email address will not be published. Required fields are marked *