ಡಿಕೆಶಿ ಏಕೆ ಮುಖ್ಯಮಂತ್ರಿ ಆಗಬಾರದು: ನಂಜಾವಧೂತ ಶ್ರೀ

– ಕೆಣಕಿದರೆ ಡಿಕೆಶಿ ದೊಡ್ಡ ಶಕ್ತಿಯಾಗಿ ಹೊರ ಬರುತ್ತಾರೆ
– ಪ್ರಧಾನಿ ಮೋದಿಯಿಂದ ವೈಯಕ್ತಿಕ ಟಾರ್ಗೆಟ್

ಬೆಂಗಳೂರು: ತುಮಕೂರು ಜಿಲ್ಲೆಯ ಶಿರಾದ ಪಟ್ಟನಾಯಕನಹಳ್ಳಿಯ ಸ್ಪಟಿಕಪುರಿ ಮಠಕ್ಕೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಭೇಟಿ ನೀಡಿ, ನಂಜಾವಧೂತ ಶ್ರೀಗಳ ಆಶೀರ್ವಾದ ಪಡೆದರು.

ಪಟ್ಟನಾಯಕನಹಳ್ಳಿ ಮಠದ ಆವರಣದಲ್ಲಿ ಅಭಿಮಾನಿಗಳ ಹರ್ಷ ಮುಗಿಲು ಮುಟ್ಟಿತ್ತು. ಮುಂದಿನ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಎಂದು ಕೆಲ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಜೈಕಾರ ಕೂಗಿದರು. ಮಠಕ್ಕೆ ಆಗಮಿಸಿದ ಮಾಜಿ ಸಚಿವರು ಮೊದಲಿಗೆ ಓಂಕಾರೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಡಿಕೆ ಶಿವಕುಮಾರ್ ಅವರಿಗೆ ಸಂಸದ ಡಿ.ಕೆ.ಸುರೇಶ್, ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್ ಶ್ರೀನಿವಾಸ್ ಸಾಥ್ ನೀಡಿದರು. ಇದನ್ನೂ ಓದಿ: ಡಿಕೆಶಿ ಸಿಎಂ ಆಗುವರೆಗೂ ಮದುವೆಯಾಗಲ್ಲ: ಅಭಿಮಾನಿ ಶಪಥ

ಮಾಜಿ ಸಚಿವರ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶ್ರೀಗಳು, ಕೆಣಕಿದರೆ ಡಿ.ಕೆ.ಶಿವಕುಮಾರ್ ಅವರು ದೊಡ್ಡ ಶಕ್ತಿಯಾಗಿ ಹೊರ ಬರುತ್ತಾರೆ. ಎಲ್ಲರಿಗೂ ಒಳ್ಳೆಯ ಸಮಯ, ಕೆಟ್ಟ ಸಮಯ ಅಂತ ಇರತ್ತದೆ. ಡಿಕೆ ಶಿವಕುಮಾರ್ ಅವರಿಗೆ ಇದ್ದ ಕೆಟ್ಟ ಗಳಿಗೆ ಹೋಗಲಿ ಅಂತ ಪ್ರಾರ್ಥಿಸಿದ್ದೇವೆ. ಅವರು ನಾಡಿನ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಒಂದಷ್ಟು ನೋವಾಗಿದೆ, ಕಷ್ಟ ಎದುರಿಸುವ ಪರಿಸ್ಥಿತಿ ಬಂದಿದೆ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯರ ಮೇಲೆ ನಂಬಿಕೆ ಇದೆ, ಅವ್ರು ಆ ರೀತಿ ಹೇಳಿರಲ್ಲ: ಡಿಕೆಶಿ ತಿರುಗೇಟು

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಡಿಕೆ ಶಿವಕುಮಾರ್, ಸಚಿವ ಆರ್.ಅಶೋಕ್, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸೇರಿದಂತೆ ಒಕ್ಕಲಿಗ ಸಮುದಾಯದ ಯಾವುದೇ ಧ್ವನಿಗೆ ಪೆಟ್ಟು ಬಿದ್ದಾಗ ಪಕ್ಷಾತೀತವಾಗಿ ಬೆಂಬಲಿಸುತ್ತೇವೆ. ಒಕ್ಕಲಿಗರು ಒಂದಾಗಿ ಧ್ವನಿ ಬಲಪಡಿಸುತ್ತೇವೆ ಎಂದು ಹೇಳಿದರು.

ಡಿಕೆ ಶಿವಕುಮಾರ್ ಅವರು ಏಕೆ ಮುಖ್ಯಮಂತ್ರಿ ಆಗಬಾರದು. ಅವರಿಗೆ ಎಲ್ಲವನ್ನೂ ನಿಭಾಯಿಸುವ ಸಾಮರ್ಥ್ಯ, ಶಕ್ತಿ ಇದೆ. ಒಕ್ಕಲಿಗ ಸಮುದಾಯದ ಎಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕರೆ ಖುಷಿಪಡುತ್ತೇವೆ. ಈಗ ಸಿಎಂ ಸ್ಥಾನ ಖಾಲಿ ಇಲ್ಲ. ಬಿ.ಎಸ್.ಯಡಿಯೂರಪ್ಪ ಅಧಿಕಾರದಲ್ಲಿ ಇದ್ದಾರೆ. ಅವರು ಚನ್ನಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕು. ಅದನ್ನು ಬಿಟ್ಟು ವೈಯಕ್ತಿಕ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಶ್ರೀಗಳು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ವಿರುದ್ಧ ಮೋದಿ ಟಾರ್ಗೆಟ್ ಮಾಡಿದ್ದಾರೆ ಅಂತ ಛಾಟಿ ಬೀಸಿದರು.

Comments

Leave a Reply

Your email address will not be published. Required fields are marked *