Taiwan Earthquake – 7.4 ತೀವ್ರತೆಯ ಪ್ರಬಲ ಭೂಕಂಪ – ಸುನಾಮಿ ಎಚ್ಚರಿಕೆ

ತೈಪೆ: ಬುಧವಾರ ಬೆಳಗ್ಗೆ ತೈವಾನ್‌ನ (Taiwan) ಪೂರ್ವದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ (Earthquake) ಸಂಭವಿಸಿದ್ದು ಸುನಾಮಿ (Tsunami) ಎಚ್ಚರಿಕೆ ನೀಡಲಾಗಿದೆ.

ತೈವಾನ್‌, ಜಪಾನ್ (Japan) ಮತ್ತು ಫಿಲಿಪೈನ್ಸ್‌ನ ಕೆಲವು ಭಾಗಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದ್ದು ತೀರ ಪ್ರದೇಶದಿಂದ ದೂರ ತೆರಳುವಂತೆ ಸೂಚಿಸಲಾಗಿದೆ. ಭೂಕಂಪದ ತೀವ್ರತೆಗೆ ಬೃಹತ್‌ ಗಾತ್ರದ ಕಟ್ಟಡಗಳು ನೆಲಕ್ಕೆ ಉರುಳಿದೆ.

ಕಳೆದ 25 ವರ್ಷದಲ್ಲಿ ತೈವಾನ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪ ಇದಾಗಿದೆ. ತೈವಾನ್‌ನ ಹುವಾಲಿಯನ್ ಸಿಟಿಯಿಂದ ದಕ್ಷಿಣಕ್ಕೆ 18 ಕಿಲೋಮೀಟರ್ ದೂರದಲ್ಲಿ 34.8 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ.

ಜಪಾನ್‌ನ ಹವಾಮಾನ ಸಂಸ್ಥೆಯು ಮಿಯಾಕೊಜಿಮಾ ದ್ವೀಪ ಸೇರಿದಂತೆ ಈ ಪ್ರದೇಶದಲ್ಲಿನ ದೂರದ ಜಪಾನಿನ ದ್ವೀಪಗಳಿಗೆ ಮೂರು ಮೀಟರ್‌ಗಳಷ್ಟು (10 ಅಡಿ) ಎತ್ತರದ ಸುನಾಮಿ ಅಲೆಗಳ ಬಗ್ಗೆ ಎಚ್ಚರಿಕೆಯನ್ನು ನೀಡಿದೆ.

ಕರಾವಳಿ ಪ್ರದೇಶಗಳಲ್ಲಿನ ಜನರು ಜಾಗರೂಕರಾಗಿರಬೇಕು. ಸಮುದ್ರದಲ್ಲಿ ಭಾರೀ ಗಾತ್ರದ ಅಲೆಗಳು ಏಳಬಹುದು ಎಂದು ತೈವಾನ್‌ ತನ್ನ ಪ್ರಜೆಗಳಿಗೆ ಪಠ್ಯ ಸಂದೇಶವನ್ನು ಕಳುಹಿಸುವ ಮೂಲಕ ಎಚ್ಚರಿಕೆ ನೀಡಿದೆ.