2020ರೊಳಗೆ ಭಾರತವನ್ನು ಮುಸ್ಲಿಂ ರಾಷ್ಟ್ರವಾಗಿಸಲು ಪ್ರಯತ್ನಿಸಬೇಕು- ಪಿಎಫ್‍ಐ, ಕೆಎಫ್‍ಡಿ ಹೆಸರಲ್ಲಿ ಕರಪತ್ರ

ಮಂಗಳೂರು: 2020ರೊಳಗೆ ಭಾರತವನ್ನು ಮುಸ್ಲಿಂ ರಾಷ್ಟ್ರವಾಗಿಸಲು ಪ್ರಯತ್ನಿಸಬೇಕು ಎಂದು ಪಿಎಫ್‍ಐ ಮತ್ತು ಕೆಎಫ್‍ಡಿ ಹೆಸರಲ್ಲಿ ಮನವಿ ಮಾಡಿಕೊಂಡಿರುವ ಕರಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮುಸ್ಲಿಂ ರಾಷ್ಟ್ರವನ್ನಾಗಿಸಲು ಅನ್ಯಧರ್ಮೀಯರನ್ನು ಮತಾಂತರಗೊಳಿಸುವುದು, ದೇಶದಲ್ಲಿ ಕೋಮುಗಲಭೆ ಎಬ್ಬಿಸುವುದು, ಅನ್ಯ ಸಮುದಾಯವನ್ನು ನಾಶ ಮಾಡುವುದು, ಅನ್ಯಧರ್ಮೀಯ ಯುವತಿಯರನ್ನು ಅತ್ಯಾಚಾರಕ್ಕೆ ಒಳಪಡಿಸಿ ಮತಾಂತರಿಸುವುದು, ಅನ್ಯರ ವ್ಯಾಪಾರ ಕೇಂದ್ರಗಳಿಗೆ ಹೋಗಬಾರದು, ನಮ್ಮವರ ಆರೋಗ್ಯ ಕೇಂದ್ರಗಳಿಗೆ ಅನ್ಯರು ಹೆರಿಗೆಗಾಗಿ ಬಂದರೆ ಮಗು ಸಾಯುವಂತೆ ಇಂಜೆಕ್ಷನ್ ಕೊಡಬೇಕು ಇತ್ಯಾದಿ ಸಲಹೆಗಳನ್ನು ಕೊಡಲಾಗಿದೆ. ಈ ಕರಪತ್ರದ ಪ್ರತಿಗಳು ಈಗ ವಾಟ್ಸಪ್ ಗ್ರೂಪ್ ಗಳಲ್ಲಿ ಹರಿದಾಡುತ್ತಿದ್ದು, ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿದೆ.

ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಕರ್ನಾಟಕ ಫೋರಂ ಫಾರ್ ಡಿಗ್ನಿಟಿ(ಕೆಎಫ್‍ಡಿ) ಸಂಘಟನೆಯ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‍ಐ) ಸಂಘಟನೆಯನ್ನು ನಿಷೇಧಿಸಬೇಕು ಎಂದು ಈ ಹಿಂದೆಯೇ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ರಾಜ್ಯದಲ್ಲಿ ಪ್ರತಿಭಟನೆ ನಡೆಸಿತ್ತು. ಈಗ ಪಿಎಫ್‍ಐ ಮತ್ತು ಕೆಎಫ್‍ಡಿ ಹೆಸರಿನಲ್ಲಿ ಕರಪತ್ರ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈ ಸಂಘಟನೆಯನ್ನು ನಿಷೇಧಿಸಬೇಕೆಂಬ ಆಗ್ರಹ ಕೇಳಿಬಂದಿದೆ.

ಸೃಷ್ಟಿ ಯಾರದ್ದು?
ಈ ಕರಪತ್ರವನ್ನು ಸೃಷ್ಟಿಸಿದ್ದು ಯಾರು ಎನ್ನುವುದು ತಿಳಿದು ಬಂದಿಲ್ಲ. ಹೀಗಾಗಿ ಮತ್ತೆ ಗಲಭೆಗೆ ಕಾರಣವಾಗುವ ಮುನ್ನ ಪೊಲೀಸರು ಎಚ್ಚೆತ್ತುಕೊಂಡು, ಕರಪತ್ರದ ಸತ್ಯಾಸತ್ಯತೆಯನ್ನು ಪತ್ತೆಹಚ್ಚಬೇಕಾಗಿದೆ.

Comments

Leave a Reply

Your email address will not be published. Required fields are marked *