ಟ್ರಂಪ್-ಝೆಲೆನ್ಸ್ಕಿ ನಡ್ವೆ ಮಾತಿನ ಚಕಮಕಿಗೆ ಬೆಚ್ಚಿಬಿದ್ದ ವಿಶ್ವ – ನಿಮ್ಮಿಂದ 3ನೇ ಮಹಾಯುದ್ಧ ಎಂದ ಯುಎಸ್‌ ಅಧ್ಯಕ್ಷ

– ಭದ್ರತಾ ಖಾತ್ರಿಯಿಲ್ಲದೇ ಕದನವಿರಾಮ ಸಾಧ್ಯವಿಲ್ಲ: ಝೆಲೆನ್ಸ್ಕಿ

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮತ್ತು ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಜೊತೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelensky) ನಡೆಸಿದ ಚರ್ಚೆ ಉದ್ವಿಗ್ನತೆ ಪಡೆದುಕೊಂಡಿದೆ, ಚರ್ಚೆ ವೇಳೆ ನಡೆದ ವಾಗ್ವಾದ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ.

ಓವಲ್ ಕಚೇರಿಯಲ್ಲಿ ನಾಯರಿಬ್ಬರ ಭೇಟಿ ಸಮಯದಲ್ಲಿ ಈ ವಿದ್ಯಮಾನ ನಡೆದಿದೆ. ಆರಂಭದಲ್ಲಿ ಅಮೆರಿಕ ಮತ್ತು ಉಕ್ರೇನ್‌ ನಡುವೆ ಖನಿಜ ಒಪ್ಪಂದಗಳ ನಡುವೆ ಮಾತುಕತೆ ಸಾಗಿತ್ತು. ಈ ವೇಳೆ ಭದ್ರತಾ ವಿಚಾರಗಳ ಕುರಿತು ಚರ್ಚಿಸಲು ಮುಂದಾದರು, ಆಗ ಟ್ರಂಪ್‌ ನಾನು ಭದ್ರತೆಯ ಬಗ್ಗೆ ಈಗ ಮಾತನಾಡಲು ಬಯಸುವುದಿಲ್ಲ. ಈಗ ಖನಿಜ ಒಪ್ಪಂದಗಳ ಬಗ್ಗೆ ಮಾತನಾಡಲು ಬಯಸುತ್ತೇನೆ ಎಂದರು. ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದಂತೆ, ಟ್ರಂಪ್ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರನ್ನು ಶ್ವೇತಭವನದಿಂದ ಹೊರಹೋಗುವಂತೆ ಸೂಚಿಸಿದರು.

ಝೆಲೆನ್ಸ್ಕಿ ಉಕ್ರೇನ್‌ಗೆ ಯುಎಸ್ ಬೆಂಬಲವನ್ನು ಕೋರಿದರು. ಆದರೆ ಈ ಭೇಟಿ ಒಪ್ಪಂದಕ್ಕೆ ಸಹಿ ಹಾಕದೇ ಮತ್ತು ಜಂಟಿ ಪತ್ರಿಕಾಗೋಷ್ಠಿಯನ್ನು ರದ್ದುಗೊಳಿಸುವುದರೊಂದಿಗೆ ಕೊನೆಗೊಂಡಿತು. ಝೆಲೆನ್ಸ್ಕಿ ಅಮೆರಿಕದ ಬೆಂಬಲಕ್ಕೆ ಕೃತಜ್ಞತೆ ತೋರಿಸದಿರುವುದು ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ರಾಜತಾಂತ್ರಿಕ ನಿಲುವನ್ನು ಚರ್ಚಿಸಲು ಪ್ರಯತ್ನಿಸಿದ್ದಕ್ಕೆ ಟ್ರಂಪ್ ಮತ್ತು ವ್ಯಾನ್ಸ್ ತೀವ್ರವಾಗಿ ಟೀಕಿಸಿದರು. ನೀವು ಇದೇ ರೀತಿ ನಡೆದುಕೊಂಡರೆ, ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಿಮ್ಮಿಂದ 3ನೇ ಮಹಾಯುದ್ಧ:
ಝಲೆನ್ಸ್ಕಿ ಭದ್ರತಾ ವಿಚಾರಗಳ ಕುರಿತು ಚರ್ಚಿಸಲು ಮುಂದಾದಾಗ ನೀವು ಲಕ್ಷಾಂತರ ಜನರ ಜೀವಗಳೊಂದಿಗೆ ಆಟವಾಡುತ್ತಿದ್ದೀರಿ, 3ನೇ ಮಹಾಯುದ್ಧದೊಂದಿಗೆ (3rd World War) ಜೂಜಾಡುತ್ತಿದ್ದೀರಿ, ನಿಮ್ಮಿಂದ ಯುದ್ಧ ನಡೆಯಬಹುದು. ನೀವು ಹೀಗೆ ಮಾಡುತ್ತಿರುವುದು ಈ ದೇಶಕ್ಕೆ ತುಂಬಾ ಅಗೌರವವಾಗಿದೆ ಎಂದು ನೇರ ವಾಗ್ದಾಳಿ ನಡೆಸಿದರು.

ಮುಂದುವರಿದು, ನೀವು ಧೈರ್ಯವಂತರಿರಬಹುದು, ಆದ್ರೂ ಖನಿಜ ಒಪ್ಪಂದಕ್ಕೆ ಸಹಿ ಹಾಕಲೇಬೇಕು. ಇಲ್ಲದಿದ್ರೆ ನಾವು ನಿಮಗೆ ಸಹಾಯ ಮಾಡುವುದಿಲ್ಲ. ನಾವು ಸಹಾಯ ಮಾಡದಿದ್ದರೆ, ನೀವು ಯುದ್ಧ ಮುಂದುವರಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ನೀವು ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ರು. ಈ ವೇಳೆ ಝಲೆನ್ಸ್ಕಿ.. ಪತ್ರಕರ್ತರ ಎದುರು ನೀವು ಈ ರೀತಿ ಮಾತನಾಡುವುದು ಗೌರವ ತರುವುದಿಲ್ಲ ಎಂದು ಹೇಳಿದಕ್ಕೆ ಕೆಂಡವಾದ ಟ್ರಂಪ್‌ ನಿಮ್ಮ ನಡೆಯಿಂದ 3ನೇ ಮಹಾಯುದ್ಧ ಸಂಭವಿಸಬಹುದು. ಇದು ಇಡೀ ಜಗತ್ತು ಸಮಸ್ಯೆಗೆ ಸಿಲುಕಿಕೊಳ್ಳಬಹುದು ಎಂದು ಘರ್ಜಿಸಿದರು.

ಈಗಾಗಲೇ ಉಕ್ರೇನ್‌ಗೆ ಫ್ರಾನ್ಸ್‌, ಬ್ರಿಟನ್‌ ಹಾಗೂ ಇತರ ದೇಶಗಳು ಭದ್ರತೆ ಒದಗಿಸುತ್ತಿವೆ ಎಂದು ನನಗೆ ತಿಳಿದಿದೆ. ಆದ್ರೆ ನಾವು ಯುದ್ಧವನ್ನು ಮುಂದುವರಿಸಲು ಸಿದ್ಧರಿಲ್ಲ. ಈ ಸಮಸ್ಯೆಯನ್ನು ಸಮಾಪ್ತಿ ಮಾಡಲು ಎದುರುನೋಡುತ್ತಿದ್ದೇವೆ. ಆದ್ರೆ ನಾವು ಉಕ್ರೇನ್‌ಗೆ ಬೇರೊಂದು ರೀತಿಯಲ್ಲಿ ಭದ್ರತೆ ನೀಡುತ್ತೇವೆ. ನಮ್ಮ ಕಾರ್ಮಿಕರು ಅಲ್ಲಿಯೇ ಇದ್ದು ಖನಿಜ ಸಂಪತ್ತನ್ನು ಹೊರ ತೆಗೆಯುತ್ತಾರೆ. ನಾವು ನಿಮ್ಮ ದೇಶದಲ್ಲಿ ಉತ್ತಮ ಉತ್ಪನ್ನಗಳನ್ನು ತಯಾರಿಸುತ್ತೇವೆ ಎಂದು ಟ್ರಂಪ್‌ ಆರ್ಥಿಕವಾಗಿ ಅಭಿವೃದ್ಧಿಪಡಿಸಿರುವ ಭರವಸೆ ನೀಡಿದರು.

ಭದ್ರತಾ ಖಾತ್ರಿಯಿಲ್ಲದೇ ಕದನವಿರಾಮ ಸಾಧ್ಯವಿಲ್ಲ:
ಇದೇ ವೇಳೆ ಪತ್ರಕರ್ತರಿಗೆ ಭದ್ರತೆಯ ಬಗ್ಗೆ ಝಲೆನ್ಸ್ಕಿ ಕೂಡ ಪ್ರತಿಕ್ರಿಯಿಸಿದರು. ನಾವೀಗ ಕದನ ವಿರಾಮದ ಬಗ್ಗೆ ಮಾತನಾಡಲು ಸಾಧ್ಯವಿಲ್ಲ, ಏಕೆಂದರೆ ಅದು ಎಂದಿಗೂ ಪ್ರಯೋಜನಕಾರಿಯಾಗಲಿಲ್ಲ. ಪುಟಿನ್‌ ಅವರು 25 ಬಾರಿ ಕದನ ವಿರಾಮ ಘೋಷಿಸಿ, ಯುದ್ಧ ಮುಂದುವರಿಸಿದ್ದಾರೆ. ಭದ್ರತಾ ಖಾತ್ರಿಯಿಲ್ಲದೇ ಕದನ ವಿರಾಮ ಮುಂದುವರಿಸಲು ಸಾಧ್ಯವಿಲ್ಲ ಎಂದು ಉಕ್ರೇನ್‌ ಅಧ್ಯಕ್ಷ ಖಡಾಖಂಡಿತವಾಗಿ ಹೇಳಿದರು.

ಟ್ರಂಪ್‌ ಈ ಯುದ್ಧ ನಿಲ್ಲಿಸುವ ಉದ್ದೇಶ ಹೊಂದಿರಬಹುದು. ಆದ್ರೆ ಅದಕ್ಕೆ ನಮ್ಮ ಬಳಿಯೂ ಬಲವಾದ ಸೈನ್ಯ ಇರಬೇಕು. ನಾವು ಬಲಿಷ್ಠವಾಗಿದ್ದರೆ ಮಾತ್ರ ಪುಟಿನ್‌ ಸೈನ್ಯವು ನಮಗೆ ಹೆಸರುತ್ತದೆ. ನಮ್ಮ ಸೈನ್ಯವು ಖಾಲಿಯಾಗಿದ್ದರೆ, ಪುಟಿನ್‌ ಸೇನೆ ನಮ್ಮ ಮೇಲೆ ಸವಾರಿ ಮಾಡುತ್ತದೆ. ಆಗ ನಮ್ಮನ್ನೂ ನಾವು ಉಳಿಸಿಕೊಳ್ಳು ಸಾಧ್ಯವಾಗಲ್ಲ ಎಂದು ಝಲೆನ್ಸ್ಕಿ ಕಳವಳ ವ್ಯಕ್ತಪಡಿಸಿದರು.