ಅಮೆರಿಕದ ’52 ಟಾರ್ಗೆಟ್’ ಸಂಖ್ಯೆಗೆ ‘290’ ಪ್ರಸ್ತಾಪಿಸಿ ತಿರುಗೇಟು ಕೊಟ್ಟ ಇರಾನ್

ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತಷ್ಟು ಜೋರಾಗಿದೆ. ನಾವು ಸೈಬರ್ ವಾರ್ ಆರಂಭಿಸುತ್ತೇವೆ ಎಂದು ಟ್ರಂಪ್ ಘೋಷಿಸಿಕೊಂಡ ಬೆನ್ನಲ್ಲೇ ಈ ಹಿಂದಿನ ನಿಮ್ಮ ಎಡವಟ್ಟನ್ನು ನೆನಪಿನಲ್ಲಿಟ್ಟುಕೊಳ್ಳಿ ಎಂಬರ್ಥದಲ್ಲಿ ಟ್ವೀಟ್ ಮಾಡಿ ಇರಾನ್ ತಿರುಗೇಟು ನೀಡಿದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕದ ವ್ಯಕ್ತಿ ಅಥವಾ ಅಮೆರಿಕದ ಯಾವುದೇ ಆಸ್ತಿಯನ್ನು ಹಾನಿ ಮಾಡಿದರೆ ಇರಾನ್ ದುಬಾರಿ ಬೆಲೆ ತೆರಬೇಕಾಗುತ್ತದೆ. ಈಗಾಗಲೇ ನಾವು ದಾಳಿ ಮಾಡಲು 52 ವೆಬ್‍ಸೈಟ್ ಗಳನ್ನು ಟಾರ್ಗೆಟ್ ಮಾಡಿದ್ದೇವೆ ಎಂದು ಟ್ವೀಟ್ ಮಾಡಿ ಎಚ್ಚರಿಕೆ ನೀಡಿದ್ದರು.

ಈ ಬೆದರಿಕೆಗೆ ಜಗ್ಗದ ಇರಾನ್ ಅಧ್ಯಕ್ಷ ಹಸನ್ ರೌಹಾನಿ, ಸಂಖ್ಯೆ 52ನ್ನು ಉಲ್ಲೇಖಿಸುವ ವ್ಯಕ್ತಿಗಳು ಸಂಖ್ಯೆ 290ನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇರಾನ್ ರಾಷ್ಟ್ರಕ್ಕೆ ಯಾವುದೇ ಕಾರಣಕ್ಕೂ ಬೆದರಿಕೆ ಹಾಕದಿರಿ ಎಂದು ಬರೆದು #IR655 ಬಳಸಿ ಟ್ವೀಟ್ ಮಾಡಿದ್ದಾರೆ.

ಏನಿದು ಸಂಖ್ಯೆ 290?
ಇರಾನ್ ಮತ್ತು ಅಮೆರಿಕ ಮಧ್ಯೆ ಗುದ್ದಾಟ ನಡೆಯುತ್ತಿರುವಾಗಲೇ 1988ರ ಜುಲೈ 3 ರಂದು ಟೆಹರಾನ್ ನಿಂದ ದುಬೈಗೆ ಇರಾನ್ ಏರ್ ಫೈಟ್ 655 ಪ್ರಯಾಣಿಸುತಿತ್ತು. ಈ ವಿಮಾನವನ್ನು ಅಮೆರಿಕ ತನ್ನ ಕ್ಷಿಪಣಿಯನ್ನು ಬಳಸಿ ನೆಲಕ್ಕೆ ಉರುಳಿಸಿತ್ತು. 66 ಮಕ್ಕಳು ಸೇರಿದಂತೆ ವಿಮಾನದಲ್ಲಿದ್ದ ಎಲ್ಲ 290 ಮಂದಿ ಮೃತಪಟ್ಟಿದ್ದರು. ಎಂದಿನ ಮಾರ್ಗದಲ್ಲಿ ವಿಮಾನ ಸಂಚರಿಸುತ್ತಿದ್ದರೂ ಈ ಪ್ರಯಾಣಿಕ ವಿಮಾನದ ಮೇಲೆ ಅಮೆರಿಕ ದಾಳಿ ನಡೆಸಿದ್ದು ಯಾಕೆ ಎನ್ನುವ ಪ್ರಶ್ನೆ ಹುಟ್ಟು ಹಾಕಿತ್ತು. ನಂತರ ತನಿಖೆಯ ವೇಳೆ ಅಮೆರಿಕ ಈ ವಿಮಾನ ಬಾಂಬರ್ ವಿಮಾನ ಎಂದು ತಪ್ಪಾಗಿ ಅರ್ಥೈಸಿಕೊಂಡು ದಾಳಿ ನಡೆಸಿದ ವಿಚಾರ ಬೆಳಕಿಗೆ ಬಂದಿತ್ತು.

ಇರಾನ್ ಈ ವಿಚಾರವನ್ನು ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿತ್ತು. ಅಮೆರಿಕ ಈ ಘಟನೆಯ ಬಗ್ಗೆ ಯಾವುದೇ ಕ್ಷಮೆ ಕೇಳಲಿಲ್ಲ. ಆದರೆ ಅಧ್ಯಕ್ಷ ರೊನಾಲ್ಡ್ ರೇಗನ್ ವಿಷಾದ ವ್ಯಕ್ತಪಡಿಸಿದ್ದರು. ನಂತರ ಅಮೆರಿಕ 61.8 ದಶಲಕ್ಷ ಡಾಲರ್ ಹಣವನ್ನು ಪಾವತಿ ಮಾಡುತ್ತೇನೆ. ಅಷ್ಟೇ ಅಲ್ಲದೇ ಮೃತಪಟ್ಟ ವ್ಯಕ್ತಿಯ ಕುಟುಂಬದ ಸದಸ್ಯರಿಗೆ 213,103.45 ಡಾಲರ್ ನೀಡುತ್ತೇನೆ ಎಂದು ಹೇಳಿತ್ತು. ಈ ವಿಚಾರವನ್ನು ಇರಾನ್ ಅಧ್ಯಕ್ಷ ಹಸನ್ ರೌಹಾನಿ ಪ್ರಸ್ತಾಪಿಸಿ ವ್ಯಂಗ್ಯವಾಗಿ ಡೊನಾಲ್ಡ್ ಟ್ರಂಪ್‍ಗೆ ತಿರುಗೇಟು ನೀಡಿದ್ದಾರೆ.

ಸುಲೇಮಾನಿ ಅವರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಟೆಹರಾನ್ ಪ್ರತಿಜ್ಞೆ ಮಾಡಿದ್ದು ವಿಶ್ವದ ಬಲಿಷ್ಠ ರಾಷ್ಟ್ರಗಳೊಂದಿಗಿನ ತನ್ನ 2015ರ ಪರಮಾಣು ಒಪ್ಪಂದದಿಂದ ಹಿಂದೆ ಸರಿಯಲು ಮುಂದಾಗಿದೆ.

ಮಾನಿ ಉತ್ತರಾಧಿಕಾರಿ ಇಸ್ಮಾಯಿಲ್ ಖಾನಿ, `ದೇವರು ಪ್ರತೀಕಾರ ತೀರಿಸಿಕೊಳ್ಳುವ ಭರವಸೆ ನೀಡಿದ್ದಾನೆ. ದೇವರ ಅಣತಿಯಂತೆ ಖಂಡಿತವಾಗಿಯೂ ಪ್ರತೀಕಾರ ತೆಗೆದುಕೊಳ್ಳಲಾಗುವುದು’ ಎಂದು ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆಗಾಗಿ ಇರಾನ್ 575 ಕೋಟಿ ಬಹುಮಾನ ಘೋಷಿಸಿದೆ. ಇರಾನ್‍ನಲ್ಲಿ 8 ಕೋಟಿ ಜನರಿದ್ದು ಪ್ರತಿಯೊಬ್ಬರೂ ಒಂದೊಂದು ಡಾಲರ್ ನೀಡಿದರೂ ಅದು ಟ್ರಂಪ್ ತಲೆ ತೆಗೆದವರಿಗೆ ಸೇರುತ್ತದೆ ಎಂದು ಹೇಳಲಾಗಿದೆ. ಸರ್ಕಾರಿ ಸ್ವಾಮ್ಯದ ಸುದ್ದಿವಾಹಿನಿ ಈ ಕುರಿತು ಪ್ರಸಾರ ಮಾಡಿದೆ.

Comments

Leave a Reply

Your email address will not be published. Required fields are marked *