ಸ್ವಾತಂತ್ರ್ಯ ಬಂದು 71 ವರ್ಷ ಕಳೆದರೂ ಗ್ರಾಮದಲ್ಲಿ ವಿದ್ಯುತ್ ಸಂಪರ್ಕವಿಲ್ಲ

-ಲಾಟೀನು ಬೆಳಕೇ ಕತ್ತಲೆ ಕಳೆಯುವ ಸೂರ್ಯ
-ಲಾಟೀನುಗೆ ಸಿಗದ ಸೀಮೆಎಣ್ಣೆ

ಬಲರಾಂಪುರ: ಭಾರತಕ್ಕೆ ಸ್ವಾತಂತ್ರ್ಯ ಬಂದು 71 ವರ್ಷಗಳು ಕಳೆದಿದೆ. ಜಾಗತಿಕ ಮಟ್ಟದಲ್ಲಿ ತನ್ನದೇಯಾದ ವಿಶೇಷ ಸ್ಥಾನಗಳಿಸಿದೆ, ಆದರೆ ಛತ್ತೀಸ್‍ಗಡ ರಾಜ್ಯದ ಬಲರಾಂಪುರ ಜಿಲ್ಲೆಯ ತ್ರಿಶೂಲಿ ಗ್ರಾಮದ ಜನತೆ ಮಾತ್ರ ಕತ್ತಲೆಯಲ್ಲಿಯೇ ಜೀವನ ನಡೆಸುತ್ತಿದ್ದಾರೆ.

ಸುಮಾರು 100 ಮನೆಗಳಿರುವ ಬಲರಾಂಪುರ ಗ್ರಾಮದಲ್ಲಿ ಸ್ವಾತಂತ್ರ್ಯ ಬಂದು 71 ವರ್ಷಗಳು ಕಳೆದರೂ ಇಲ್ಲಿನ ಜನ ಬೆಳಕು ಕಂಡಿಲ್ಲ. ಇಲ್ಲಿ ವಿದ್ಯುತ್ ಕಂಬಗಳು ಇದ್ದರೂ ಸಹ ಏಳು ದಶಕಗಳಿಂದ ಇಲ್ಲಿನ ಜನರಿಗೆ ವಿದ್ಯುತ್ ಸಂಪರ್ಕ ಲಭ್ಯವಾಗಿಲ್ಲ. ಈಗಾಗಲೇ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಅಧಿಕಾರಿಗಳಿಗೆ ಗ್ರಾಮಸ್ಥರು ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿನ ಜನರು ಕತ್ತಲೆಯಲ್ಲಿಯೇ ಜೀವನ ನಡೆಸುತ್ತಿದ್ದರೂ ಅಧಿಕಾರಿಗಳು ಮಾತ್ರ ಕ್ಯಾರೆ ಅನ್ನುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ನಾನು ಹುಟ್ಟಿದಾಗಿನಿಂದಲೂ ಈ ಗ್ರಾಮದಲ್ಲಿ ವಿದ್ಯುತ್ ಕಂಡಿಲ್ಲ. ಎಲೆಕ್ಷನ್ ಸಂದರ್ಭದಲ್ಲಿ ಮಾತ್ರ ನಾಯಕರು ಬರುತ್ತಾರೆ. ಆದರೆ, ಸಜ್ಜನರಂತೆ ಅಭಿವೃದ್ಧಿ ಮಾಡುತ್ತೇವೆ ಎಂದು ಸುಳ್ಳು ಹೇಳುತ್ತಾರೆ. ಬಳಿಕ ಗ್ರಾಮದ ಅಭಿವೃದ್ಧಿ ಬಗ್ಗೆ ಗಮನ ಹರಿಸಿಲ್ಲ ಎಂದು 70 ವರ್ಷದ ವೃದ್ಧರೊಬ್ಬರು ತಿಳಿಸಿದ್ದಾರೆ. ಹಾಗೆಯೇ ರಾತ್ರಿ ಹೊತ್ತು ಕರೆಂಟ್ ಇಲ್ಲದ ಕಾರಣ ಹಾವು, ಚೇಳುಗಳ ಕಾಟ ಹೆಚ್ಚಾಗಿದೆ. ಯಾವಾಗ ಏನು ಬಂದು ಕಚ್ಚುತ್ತದೋ ಎಂಬ ಭಯ ಕಾಡುತ್ತದೆ ಎಂದು ಸ್ಥಳೀಯರೊಬ್ಬರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಅಲ್ಲದೆ ಈ ಗ್ರಾಮದ ಮಕ್ಕಳ ಭವಿಷ್ಯ ಕೂಡ ಕತ್ತಲಲ್ಲೇ ಮಳುಗುವ ಸ್ಥಿತಿಗೆ ಬಂದಿದೆ. ವಿದ್ಯುತ್ ಇಲ್ಲದೆ ಲಾಟೀನು ಬೆಳಕಿನಲ್ಲಿ ಮಕ್ಕಳು ದಶಕಗಳಿಂದಲೂ ಓದುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲದೆ ಲಾಟೀನು ಬೆಳಕೇ ಇಲ್ಲಿ ಕತ್ತಲೆ ಕಳೆಯುವ ಸೂರ್ಯನಾಗಿದ್ದರೂ, ಅದಕ್ಕೂ ಸಹ ಸೂಕ್ತ ಸೀಮೆಎಣ್ಣೆ ಸರಬರಾಜು ಆಗುತ್ತಿಲ್ಲ. ಬೆಳಕಿಗೊಸ್ಕರ ಸೌದೆಗಳನ್ನು ಉರಿಸಿ ಆ ಬೆಂಕಿಯ ಬೆಳಕಿನಲ್ಲಿ ಕೆಲಸ ಮಾಡುತ್ತೇವೆ ಎಂದು ಗ್ರಾಮಸ್ಥ ರಾಮೇಶ್ವರ್ ಪಾಲ್ ಹೇಳಿದ್ದಾರೆ.

ಹಾಗೆಯೇ ಈ ಗ್ರಾಮದಲ್ಲಿ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಕೂಡ ಇಲ್ಲಿನ ಸರ್ಕಾರ ಮಾಡಿಲ್ಲ. ಕಲುಷಿತವಾಗಿರೋ ಕೆರೆಯ ನೀರನ್ನೇ ಇಲ್ಲಿನ ಜಾನುವಾರುಗಳು, ಜನರು ಬಳಸುತ್ತಿದ್ದಾರೆ. ದೇಶ ಇಷ್ಟೊಂದು ಮುಂದುವರೆದಿದ್ದರು ಇಂದಿಗೂ ಇಂತಹ ಮೂಲ ಸೌಕರ್ಯದಿಂದ ವಂಚಿತವಾಗಿರುವ ಗ್ರಾಮಗಳು ಇವೆ ಎಂದರೆ ಬೇಸರವಾಗುತ್ತೆ. ಆದರೆ ಇತ್ತ ಗಮನ ಕೊಡಬೇಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಂಡರು ಕಾಣದಂತೆ ಕಣ್ಮುಚ್ಚಿಕೊಂಡು ಹಾಯಾಗಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

Comments

Leave a Reply

Your email address will not be published. Required fields are marked *