ತ್ರಿಪುರ ಸ್ಥಳೀಯ ಸಂಸ್ಥೆಗಳ ಚುನಾವಣೆ: 334ಕ್ಕೆ 329 ಸ್ಥಾನಗಳಲ್ಲಿ ಬಿಜೆಪಿ ಗೆಲುವು, ಎಎಂಸಿಯಲ್ಲಿ ʼಕಮಲʼ ಕ್ಲೀನ್‌ಸ್ವೀಪ್‌

ಅಗರ್ತಲಾ: ತ್ರಿಪುರಾದ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಇಂದು ನಡೆದಿದ್ದು, ಆಡಳಿತಾರೂಢ ಬಿಜೆಪಿ ಜಯಭೇರಿ ಸಾಧಿಸಿದೆ. ಅಗರ್ತಲಾ ನಗರ ಪಾಲಿಕೆ (ಎಎಂಸಿ) 51 ವಾರ್ಡ್‌ಗಳಲ್ಲೂ ಗೆಲುವು ಸಾಧಿಸುವ ಮೂಲಕ ಬಿಜೆಪಿ ಕ್ಲೀನ್‌ಸ್ವೀಪ್‌ ಮಾಡಿದೆ.

ಎಎಂಸಿ 51 ವಾರ್ಡ್‌ಗಳಲ್ಲೂ ಬಿಜೆಪಿಯ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ. ವಾರ್ಡ್‌ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಹಾಗೂ ಸಿಪಿಐ(ಎಂ) ಪಕ್ಷಗಳು ಖಾತೆ ತೆರೆಯುವಲ್ಲಿಯೂ ವಿಫಲವಾಗಿವೆ. ಇದನ್ನೂ ಓದಿ: 140ಕ್ಕೂ ಹೆಚ್ಚು ಕ್ಷೇತ್ರ ಗೆದ್ದು ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು: BSY ಸಂಕಲ್ಪ

15 ಸದಸ್ಯ ಬಲದ ಖೋವೈ ಮುನ್ಸಿಪಲ್‌ ಕೌನ್ಸಿಲ್‌, 17 ಸದಸ್ಯ ಬಲದ ಬೆಲೋನಿಯಾ ಮುನ್ಸಿಪಲ್‌ ಕೌನ್ಸಿಲ್‌, 15 ಸದಸ್ಯ ಬಲದ ಕುಮಾರ್‌ಘಾಟ್‌ ಮುನ್ಸಿಪಲ್‌ ಕೌನ್ಸಿಲ್‌ ಮತ್ತು 9 ಸದಸ್ಯ ಬಲದ ಸಬ್‌ರೂಮ್‌ ನಗರ್‌ ಪಂಚಾಯತ್‌ನಲ್ಲಿ ಬಿಜೆಪಿ ಗೆಲುವು ಸಾಧಿಸಿದೆ ಎಂದು ರಾಜ್ಯ ಚುನಾವಣೆ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

ಧರ್ಮನಗರ ಮುನ್ಸಿಪಲ್‌ ಕೌನ್ಸಿಲ್‌ನ 25 ವಾರ್ಡ್‌ ಹಾಗೂ 15 ಸದಸ್ಯ ಬಲದ ತೆಲಿಯಾಮುರ ಮುನ್ಸಿಪಲ್‌ ಕೌನ್ಸಿಲ್‌ ಮತ್ತು 13 ಸದಸ್ಯ ಬಲದ ಅಮರ್‌ಪುರ್‌ ನಗರ ಪಂಚಾಯಿತಿಯ ಎಲ್ಲಾ ಸ್ಥಾನಗಳನ್ನೂ ಗೆಲ್ಲುವ ಮೂಲಕ ಬಿಜೆಪಿ ಕ್ಲೀನ್‌ಸ್ವೀಪ್‌ ಸಾಧಿಸಿದೆ.

ಸೊನಾಮುರ ನಗರ ಪಂಚಾಯಿತಿ ಮತ್ತು ಮೆಲಘರ್‌ ನಗರ ಪಂಚಾಯಿತಿ 13 ಸ್ಥಾನಗಳನ್ನೂ ಬಿಜೆಪಿ ತನ್ನದಾಗಿಸಿಕೊಂಡಿದೆ. ಜಿರಾನಿಯಾ ನಗರ ಪಂಚಾಯಿತಿಯ 11 ಸ್ಥಾನಗಳಲ್ಲೂ ಬಿಜೆಪಿ ಜಯದ ನಗೆಬೀರಿದೆ. ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ, ಬೊಮ್ಮಾಯಿ ನಾಮಪತ್ರ ವಾಪಸ್ ಪಡೆಯುವಂತೆ ಒತ್ತಡ ಹಾಕಿದ್ದಾರೆ: ಮಲ್ಲಿಕಾರ್ಜುನ ಲೋಣಿ

ಅಂಬಸ್ಸ ಮುನ್ಸಿಪಲ್‌ ಕೌನ್ಸಿಲ್‌ನಲ್ಲಿ 12 ಸೀಟ್‌ಗಳನ್ನು ಬಿಜೆಪಿ ಗೆದ್ದಿದೆ. ಇಲ್ಲಿ ಮಾತ್ರ ಟಿಎಂಸಿ ಮತ್ತು ಸಿಪಿಐ(ಎಂ) ತಲಾ ಒಂದು ಸ್ಥಾನ ಗೆಲ್ಲಲಷ್ಟೇ ಶಕ್ತವಾಗಿವೆ. ಇಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬರು ಗೆಲುವು ಸಾಧಿಸಿದ್ದಾರೆ. ಕೈಲಾಶಹರ್‌ ಮುನ್ಸಿಪಲ್‌ ಕೌನ್ಸಿಲ್‌ನಲ್ಲಿ ಬಿಜೆಪಿ 16 ಸ್ಥಾನಗಳನ್ನು ಗೆದ್ದಿದೆ. ಸಿಪಿಐ(ಎಂ) ಒಂದು ಸ್ಥಾನ ಗೆದ್ದಿದೆ. ಪಣಿಸಗರ್‌ ನಗರ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಸಿಪಿಐ(ಎಂ) ಒಂದು ಸ್ಥಾನವನ್ನು ಮಾತ್ರ ತನ್ನದಾಗಿಸಿಕೊಂಡಿದೆ. ಒಟ್ಟು 334 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 329, ಸಿಪಿಐ(ಎಂ) 3, ಟಿಎಂಸಿ 1, ತಿಪ್ರ 1 ಸ್ಥಾನಗಳಲ್ಲಿ ಜಯ ಸಾಧಿಸಿವೆ.

51 ವಾರ್ಡ್‌ಗಳು, 13 ಮುನ್ಸಿಪಲ್‌ ಕೌನ್ಸಿಲ್‌ಗಳು ಮತ್ತು 6 ನಗರ ಪಂಚಾಯತ್‌ಗಳನ್ನು ಹೊಂದಿರುವ ಎಎಂಸಿ ಸೇರಿದಂತೆ ತ್ರಿಪುರಾದ ಸ್ಥಳೀಯ ಸಂಸ್ಥೆಗಳ ಒಟ್ಟು 334 ಸ್ಥಾನಗಳಿಗೆ ಮತದಾನ ನಡೆದಿತ್ತು. ಈ ಎಲ್ಲಾ ಸ್ಥಾನಗಳಲ್ಲೂ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಒಟ್ಟು ಸ್ಥಾನಗಳ ಪೈಕಿ 112 ಸ್ಥಾನಗಳಲ್ಲಿ ಬಿಜೆಪಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದರು. 2018ರಲ್ಲಿ ತ್ರಿಪುರಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿತ್ತು.

Comments

Leave a Reply

Your email address will not be published. Required fields are marked *