ಸಂಸತ್ ಮುಂದೆ ಪೋಸ್- ಯುವ ಸಂಸದೆಯರು ಟ್ರೋಲ್

ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಾಗಿ ಮಹಿಳಾ ಸಿನಿ ಕಲಾವಿದರು ಗೆಲುವು ಸಾಧಿಸಿದ್ದಾರೆ. ಇದೀಗ ಚುನಾವಣೆಯಲ್ಲಿ ಗೆದ್ದಿರುವ ಇಬ್ಬರು ಯುವ ನಟಿಯರು ಸಂಸತ್ ಮುಂದೆ ಪೋಸ್ ಕೊಟ್ಟು ಟ್ರೋಲ್‍ಗೆ ಒಳಗಾಗಿದ್ದಾರೆ.

ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿ ಮಿಮಿ ಚಕ್ರಬೋರ್ತಿ ಮತ್ತು ನುಸ್ರತ್ ಜಹಾನ್ ಇಬ್ಬರು ನೂತನ ಸಂಸದೆಯರಾಗಿ ಆಯ್ಕೆಯಾಗಿದ್ದಾರೆ. ಮೊದಲ ಬಾರಿಗೆ ಸಂಸತ್‍ಗೆ ಪ್ರವೇಶಿಸಿದ ಖುಷಿಯಲ್ಲಿದ್ದ ಇವರು ಸಂಸತ್ ಭವನದ ಮುಂದೆ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇದೀಗ ಆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಮಿಮಿ ಚಕ್ರಬೋರ್ತಿ ಮತ್ತು ನುಸ್ರತ್ ಜಹಾನ್ ಇಬ್ಬರೂ ಸಾಂಪ್ರದಾಯಿಕ ರಾಜಕಾಣಿಗಳಿಗಿಂತ ವಿಭಿನ್ನವಾಗಿ ಜೀನ್ಸ್, ವೈಟ್ ಶರ್ಟ್ ಧರಿಸಿ ಮಿಂಚಿದ್ದಾರೆ. ಹಾಗೆಯೇ ನುಸ್ರತ್ ಜಹಾನ್ ಕೂಡ ಪ್ಯಾಂಟ್ ಮತ್ತು ಟಾಪ್ ಧರಿಸಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಆ ಫೋಟೋಗಳಿಗೆ ‘ನಾವು ಅಧಿಕೃತವಾಗಿ ಸಂಸತ್‍ನಲ್ಲಿ ಸಂಸದೆಯರಾಗಿ ನಮ್ಮ ಹೆಸರನ್ನ ನಮೂಸಿದೆವು’ ಎಂದು ಕ್ಯಾಪ್ಶನ್ ಕೊಟ್ಟು ಅಪ್ಲೋಡ್ ಮಾಡಿದ್ದಾರೆ. ಈ ಪೋಸ್ಟ್ ಗೆ ನೆಟ್ಟಿಗೆರು ಕಾಮೆಂಟ್ಸ್ ಮಾಡುವ ಮೂಲಕ ಟ್ರೋಲ್ ಮಾಡುತ್ತಿದ್ದಾರೆ.

ನೆಟ್ಟಿಗರು ‘ಇದು ನಿಮ್ಮ ಸಿನಿಮಾ ಶೂಟಿಂಗ್ ಸ್ಥಳವಲ್ಲ. ಸಂಸತ್ ಭವನದ ಮುಂದೆ ನಿಂತು ಹೇಗೆ ಪೋಸ್ ಕೊಡುತ್ತಿದ್ದೀರಾ’ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ‘ನಿಮಗೆ ಯಾವ ರೀತಿ ಡ್ರೆಸ್ ಹಾಕಬೇಕು ಎಂಬುದು ಗೊತ್ತಿಲ್ವಾ? ಇದು ಸಿನಿಮಾ ಶೂಟಿಂಗ್ ಅಥವಾ ನೀವು ಟ್ರಿಪ್‍ಗೆ ಹೋಗಿಲ್ಲ. ಇದು ಕೆಲಸದ ಸಮಯ” ಎಂದು ಕಿಡಿಕಾರಿದ್ದಾರೆ.

ನುಸ್ರತ್ ಜಹಾನ್ ಲೋಕಸಭಾ ಚುನಾವಣೆಯಲ್ಲಿ 3.50 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರೆ, ಮಿಮಿ ಚಕ್ರವರ್ತಿ 2.95 ಲಕ್ಷ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಮಹಿಳಾ ಸಂಸದೆಯರು ಆಯ್ಕೆಯಾಗಿದ್ದಾರೆ. 542 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 78 ಮಹಿಳಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಪಶ್ಚಿಮ ಬಂಗಾಳದಿಂದ ಈ ಬಾರಿ 9 ಮಹಿಳಾ ಅಭ್ಯರ್ಥಿಗಳು ಲೋಕಸಭೆಯನ್ನು ಪ್ರವೇಶಿಸಿದ್ದಾರೆ.

Comments

Leave a Reply

Your email address will not be published. Required fields are marked *