ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆ ಹಲವು ಕಡೆ ಅವಾಂತರ ಸೃಷ್ಟಿಸಿದೆ. ಮೆಳೆಯ ಅಬ್ಬರಕ್ಕೆ ಆಗುತ್ತಿರುವ ಅನಾಹುತಗಳು ಮೆಸ್ಕಾಂಗೆ ತಲೆನೋವಾಗಿದೆ.
ಹೌದು. ಮಲೆನಾಡಿನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಗೆ ಜನ ಜೀವನ ಅಸ್ತವ್ಯಸ್ಥಗೊಂಡಿದ್ದು, ರಸ್ತೆಗಳ ಮೇಲೆ ಬೃಹತ್ ಮರಗಳು ಉರುಳಿ ಬಿದ್ದು ಭಾರೀ ಅವಾಂತರ ಸೃಷ್ಟಿಯಾಗಿದೆ. ಅಲ್ಲದೆ ಧರೆಗುರುಳಿರುವ ಮರಗಳ ಜೊತೆಗೆ ಹಲವು ಕಡೆ ವಿದ್ಯುತ್ ಕಂಬಗಳು ಕೂಡ ನೆಲಕ್ಕುರುಳಿದೆ. ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಬಂಡೀಗಡಿ ಬಳಿ ರಸ್ತೆಗೆ ಬೃಹತ್ ಮರ ಉರುಳಿ ಬಿದ್ದಿದೆ.

ಈ ಹಿನ್ನೆಲೆ ಮಳೆಯಲ್ಲೇ ಮರ ತೆರವು ಕಾರ್ಯಾಚರಣೆ ಮಾಡಿ, ಮೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಲೈನ್ ರಿಪೇರಿ ಕೆಲಸವನ್ನು ಮಾಡುತ್ತಿದ್ದಾರೆ. ಹೀಗೆ ಲೈನ್ ರಿಪೇರಿ ಮಾಡುತ್ತಿದ್ದ ಮೆಸ್ಕಾಂ ಸಿಬ್ಬಂದಿ ಮೇಲೆ ಮರವೊಂದು ಬಿದ್ದಿದ್ದು, ತಕ್ಷಣ ಸ್ಥಳದಲ್ಲಿದ್ದವರು ಸಿಬ್ಬಂದಿಯನ್ನು ರಕ್ಷಿಸಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಸಿಬ್ಬಂದಿ ಪಾರಾಗಿದ್ದಾರೆ.
ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕಳೆದ ಬಾರಿ 17 ಬಾರಿ ಮುಳುಗಿದ್ದ ಹೆಬ್ಬಾಳೆ ಸೇತುವೆ ಈ ವರ್ಷ ಮೊದಲ ಬಾರಿ ಮುಳುಗಡೆಯಾಗಿದ್ದು, ಮಹಾಮಳೆಗೆ ಜನ ಮನೆಯಿಂದ ಹೊರಬರದಂತ ಸ್ಥಿತಿ ನಿರ್ಮಾಣವಾಗಿದೆ.

ರಾಜ್ಯದ ಹಲವೆಡೆ ಮಳೆರಾಯನ ರೌದ್ರನರ್ತನಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಅಲ್ಲದೆ ಭಾರೀ ಮಳೆಯ ಹಿನ್ನೆಲೆ ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಗೆ ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಸುರಿಯುತ್ತಿದ್ದು, ಉತ್ತರ ಕರ್ನಾಟಕದ ಭಾಗದಲ್ಲಿ ಪ್ರವಾಹ ಸೃಷ್ಟಿಸಿದೆ. ಮಳೆಯ ಅಬ್ಬರಕ್ಕೆ ರಾಜ್ಯದ ನದಿಗಳು ಭೋರ್ಗರೆದು ಹರಿಯುತ್ತಿದ್ದು, ಚಿಕ್ಕಮಗಳೂರು ಸೇರಿದಂತೆ ಹಲವೆಡೆ ಸೇತುವೆಗಳು ಮುಳುಗಡೆಯಾಗಿದೆ, ರಸ್ತೆಗಳ ಮೇಲೆ ಮರಗಳು, ಗುಡ್ಡಗಳು ಕುಸಿದು ಸಂಚಾರ ಸ್ಥಗಿತಗೊಂಡಿದೆ.

Leave a Reply