KSRTC ಬಸ್ ದರ ಏರಿಕೆ – ಮತ್ತೆ ಸುಳಿವು ನೀಡಿದ ರಾಮಲಿಂಗಾ ರೆಡ್ಡಿ

ಬೆಂಗಳೂರು: ಕೆಎಸ್‌ಆರ್‌ಟಿಸಿ (KSRTC) ಬಸ್ ದರ ಏರಿಕೆಯಾಗುವುದು (Bus Fare) ಬಹುತೇಕ ಖಚಿತ. ಬಸ್ ದರ ಏರಿಕೆ ಮಾಡುವ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಸುಳಿವು ನೀಡಿದ್ದಾರೆ.

ಬಿಜೆಪಿ ಸರ್ಕಾರ ಕಳೆದ 5 ವರ್ಷಗಳಲ್ಲಿ ಸಾರಿಗೆ ಸಂಸ್ಥೆಗಳನ್ನು 5900 ಕೋಟಿ ರೂ.ನಷ್ಟದಲ್ಲಿಟ್ಟು ಹೋಗಿದ್ದು, ಈಗ ಸಾರಿಗೆ ಸಂಸ್ಥೆಗಳ ಪಾಡೇನು ಎಂಬುದರ ಬಗ್ಗೆ ತಾವು ಉತ್ತರ ನೀಡುವಿರಾ ಎಂದು ಪ್ರತಿಪಕ್ಷ ನಾಯಕ ಅಶೋಕ್‌ (R Ashok) ವಿರುದ್ಧ ಕಿಡಿಕಾರಿದ್ದಾರೆ.

 

 

ಅಶೋಕ್‌ ಹೇಳಿದ್ದೇನು?
ಬಸ್ ದರ ಏರಿಕೆಗೆ ಹೊಸ ಆಯೋಗ. ಪಿಕ್ ಪಾಕೆಟ್ ಸರ್ಕಾರದ ಹೊಸ ಪ್ರಯೋಗ. ಅಧಿಕಾರಕ್ಕೆ ಬಂದ ದಿನದಿಂದ ಬೆಲೆ ಏರಿಕೆ, ತೆರಿಗೆ ಹೆಚ್ಚಳ ಅಂತ ಒಂದಲ್ಲ ಒಂದು ರೀತಿ ಜನ ಸಾಮಾನ್ಯರ ಸುಲಿಗೆ ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರ (Congress Government) ಈಗ ಬಸ್ ದರ ಏರಿಕೆಗೆ ಪ್ರತ್ಯೇಕ ಆಯೋಗ ರಚಿಸಿ ಪಿಕ್ ಪಾಕೆಟ್ ಗಾಗಿ ಹೊಸ ಪ್ರಯೋಗ ಮಾಡಲು ಹೊರಟಿದೆ.

ಆಡಳಿತ ಮಾಡುವಲ್ಲಿ ಮೂರು ಕಾಸು ಪ್ರಯೋಜನ ಇಲ್ಲದಿದ್ದರೂ ಜನರಿಗೆ ಮಂಕು ಬೂದು ಎರಚಿ ಹೊಸ ಪ್ರಯೋಗಗಳ ಮೂಲಕ ಜನರನ್ನ ಸುಲಿಗೆ ಮಾಡುವಲ್ಲಿ ಕಾಂಗ್ರೆಸ್ ಪಕ್ಷದವರು ಬಹಳ ನಿಸ್ಸೀಮರು ಎಂದು ಕಿಡಿಕಾರಿದ್ದರು. ಇದನ್ನೂ ಓದಿ: ಸ್ಕೋಡಾ ಎಸ್‌ಯುವಿಗೆ ಸಂಸ್ಕೃತದ ‘ಕೈಲಾಕ್’ ಹೆಸರಿಟ್ಟು ಕಾರು ಗೆದ್ದ ಕಾಸರಗೋಡಿನ ಕುರಾನ್ ಶಿಕ್ಷಕ

ಜುಲೈ 14 ರಂದು ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ಕಳೆದ ತ್ರೈಮಾಸಿಕದಲ್ಲಿ 295 ಕೋಟಿ ರೂ. ನಷ್ಟವಾಗಿದೆ. ಟಿಕೆಟ್‌ ದರ ಏರಿಸದೇ ಇದ್ದರೆ ಕೆಎಸ್‌ಆರ್‌ಟಿಸಿ ಸಂಸ್ಥೆ ಉಳಿಯುವುದಿಲ್ಲ ಎಂದು ಹೇಳಿದ್ದರು. ಸದ್ಯದಲ್ಲೇ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರ ಹೆಚ್ಚಳ ಮಾಡಲಾಗುವುದು. ಮೊನ್ನೆ ನಿಗಮದ ಮೀಟಿಂಗ್ ಮುಗಿದಿದ್ದು 15-20% ದರ ಹೆಚ್ಚಳ ಮಾಡುವ ಪ್ರಸ್ತಾವನೆಯನ್ನು ಸಿಎಂ ಮುಂದೆ ಇಟ್ಟಿದ್ದೇವೆ ಎಂದು ಮಾಹಿತಿ ನೀಡಿದ್ದರು.

ಪ್ರತಿ ಬಾರಿಯೂ ನಷ್ಟವನ್ನು ಸರಿದೂಗಿಸಿಕೊಡುವಂತೆ ಸರ್ಕಾರವನ್ನು ಕೇಳುವುದು ಸರಿಯಲ್ಲ. ನಷ್ಟವನ್ನು ಸರಿದೂಗಿಸಲು ಹಾಗೂ ಸಂಸ್ಥೆಯನ್ನು ಉಳಿಸಬೇಕಾದರೆ ಟಿಕೆಟ್ ದರ ಹೆಚ್ಚಿಗೆ ಮಾಡಲೇಬೇಕು ಎಂದು ಸಮಜಾಯಿಷಿ ಕೊಟ್ಟಿದ್ದರು.