ಗೆಳೆಯನನ್ನ ವರಿಸಿದ ಟ್ರಾನ್ಸ್‌ಜೆಂಡರ್‌ ಪತ್ರಕರ್ತೆ

ತಿರುವನಂತಪುರಂ: ಕೇರಳದ ಕೊಚ್ಚಿಯಲ್ಲಿ ಮೊದಲ ಟ್ರಾನ್ಸ್‌ಜೆಂಡರ್‌ ಪತ್ರಕರ್ತೆ ತಮ್ಮ ಬಾಲ್ಯದ ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಪತ್ರಕರ್ತೆ ಹೈಡಿ ಸಾದಿಯಾ ತಮ್ಮ ಬಾಲ್ಯದ ಗೆಳೆಯ ಅಥರ್ವ್ ಮೋಹನ್ ಅವರನ್ನು ವರಿಸಿದ್ದಾರೆ. ಹೈಡಿ ಸಾದಿಯಾ ಮತ್ತು ಅಥರ್ವ್ ಮೋಹನ್ ಜೋಡಿಯ ಮದುವೆ ಸಮಾರಂಭವನ್ನು ಎರ್ನಾಕುಲಂ ಕಾರಯೋಗಂ ಮತ್ತು ಶ್ರೀ ಸತ್ಯಸಾಯಿ ಅನಾಥಾಶ್ರಮ ಟ್ರಸ್ಟ್ ಆಯೋಜಿಸಿತ್ತು.

ಹೈಡಿ ಸಾದಿಯಾರನ್ನು ಟ್ರಾನ್ಸ್‌ಜೆಂಡರ್‌ ಮೇಕಪ್ ಕಲಾವಿದೆ ರೆಂಜು ರೆಂಜಿ ಎಂಬವರು ದತ್ತು ಪಡೆದಿದ್ದರು. ಇತ್ತ ಮೋಹನ್ ಕೂಡ ಟ್ರಾನ್ಸ್‌ಜೆಂಡರ್‌ ಸೂರ್ಯ ಮತ್ತು ಇಶಾನ್ ದಂಪತಿಯ ದತ್ತು ಪುತ್ರರಾಗಿದ್ದಾರೆ. ಇಬ್ಬರೂ ಬಾಲ್ಯದಿಂದ ಪರಿಚಯವಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಇದೀಗ ಇಬ್ಬರೂ ಸಾಂಪ್ರದಾಯಿಕವಾಗಿ ವಿವಾಹವಾಗಿದ್ದಾರೆ.

ಮೋಹನ್ ಹರಿಪ್ಪಾದ್ ಮೂಲದವರಾಗಿದ್ದು, ತಿರುವನಂತಪುರಂನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾದಿಯಾ ತ್ರಿಶೂರ್‌ನ ಗುರುವಾಯೂರ್ ಮೂಲದವರಾಗಿದ್ದು, ಡಿಪ್ಲೋಮಾ ಮುಗಿಸಿದ ನಂತರ ಖಾಸಗಿ ಚಾನೆಲ್‍ವೊಂದರಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *