ಕಲಬುರಗಿ ಮಾರ್ಗವಾಗಿ ಬೀದರ್- ಯಶವಂತಪುರ ರೈಲು ಮಂಜೂರು

ಬೀದರ್: ಜಿಲ್ಲೆಯ ಜನರ ಬಹುದಿನಗಳ ಕನಸು ನನಸಾಗಿದ್ದು, ಕೆಲವೇ ದಿನಗಳಲ್ಲಿ ಕಲಬುರಗಿ ಮಾರ್ಗವಾಗಿ ಬೀದರ್ ಟು ಯಶವಂತಪುರ ರೈಲು ಸಂಚಾರ ಪ್ರಾರಂಭವಾಗಲಿದೆ.

ಸೋಮವಾರ ಕೇಂದ್ರ ರೈಲ್ವೆ ಇಲಾಖೆ ರೈಲು ಮಂಜೂರು ಮಾಡಿದೆ ಸಂಸದ ಭಗವಂತ್ ಖೂಬಾ ಮಾಹಿತಿ ನೀಡಿದ್ದಾರೆ. ಈ ಮೊದಲು ತೆಲಂಗಾಣದ ಸಿಕಂದರಾಬಾದ್ ಮಾರ್ಗವಾಗಿ ಬೀದರ್ ಟು ಯಶವಂತಪುರ ರೈಲು ಸಂಚಾರ ಮಾಡುತ್ತಿತ್ತು. ಹೀಗಾಗಿ ಪ್ರಯಾಣ ಸಮಯ ಹೆಚ್ಚಾಗುತ್ತಿತ್ತು.

ಕಲಬುರಗಿ ಮಾರ್ಗವಾಗಿ ರೈಲು ಸಂಚರಿಸಿದರೆ ಸಮಯ ಉಳಿಯುತ್ತದೆ ಎಂಬುದು ಜಿಲ್ಲೆಯ ಜನರ ಒತ್ತಾಯವಾಗಿತ್ತು. ಬೀದರ್ ಸಂಸದ ಭಗವಂತ್ ಖೂಬಾ ಹಲವಾರು ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿದ್ದರು. ಆದರೆ ಕಾರ್ಯ ಸಫಲವಾಗಿರಲಿಲ್ಲ. ಸೋಮವಾರ ಕೇಂದ್ರದ ರಾಜ್ಯ ರೈಲ್ವೆ ಸಚಿವ ಸುರೇಶ್ ಅಂಗಡಿಯವರನ್ನು ಖೂಬಾ ಅವರು ಭೇಟಿ ಮಾಡಿದ್ದು, ಈ ವೇಳೆ ಸುರೇಶ್ ಅಂಗಡಿಯವರು ಈ ಮಾಹಿತಿ ನೀಡಿದ್ದಾರೆ.

ಕೆಲವೇ ದಿನಗಳಲ್ಲಿ ರೈಲು ಸಂಚಾರ ಆರಂಭವಾಗಲಿದೆ ಎಂದು ಸುರೇಶ್ ಅಂಗಡಿ ತಿಳಿಸಿದ್ದಾರೆ. ರೈಲು ಮಂಜೂರು ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಸಂಸದ ಭಗವಂತ್ ಖೂಬಾ ಜಿಲ್ಲೆಯ ಜನರ ಪರವಾಗಿ ಧನ್ಯವಾದ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *