ವರುಣನ ಆರ್ಭಟಕ್ಕೆ ಮುಂಬೈ ತತ್ತರ – ರೈಲು ಸಂಚಾರ ಸ್ಥಗಿತ

ಮುಂಬೈ: ಭಾನುವಾರ ರಾತ್ರಿಯಿಂದ ಸುರಿದ ಭಾರೀ ಮಳೆಗೆ ಕನಸಿನ ನಗರಿ ತತ್ತರಿಸಿ ಹೋಗಿದ್ದು, ಬಹುತೇಕ ರಸ್ತೆಯೆಲ್ಲಾ ಜಲಾವೃತವಾಗಿ, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಮುಂಬೈ ನಗರದ ಅಂಧೇರಿ, ಕುರ್ಲಾ, ಬಾಂದ್ರಾ, ಚಾರ್ನಿ ರಸ್ತೆ, ಸಾಂತಾ ಕ್ರೂಸ್, ಬಿಕೆಸಿ, ಥಾಣೆ, ರಾಯ್ಗಡ್ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ರಸ್ತೆ ಮತ್ತು ರೈಲ್ವೇ ಹಳಿಗಳು ಜಲಾವೃತಗೊಂಡಿದ್ದು, ರೈಲು ಸಂಚಾರ ಸ್ಥಗಿತಗೊಂದಿದೆ. ಇದೇ ರೀತಿ ಇನ್ನೂ ಕೆಲವು ದಿನಗಳು ಮಳೆ ಮುಂದುವರಿಯಲಿದ್ದು, ನಗರದಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

ಭಾನುವಾರ ರಾತ್ರಿ ಮುಂಬೈನಲ್ಲಿ 360 ಮಿಲಿ ಮೀಟರ್ ನಷ್ಟು ಧಾರಾಕಾರ ಮಳೆ ಆಗಿದೆ. ಅಲ್ಲದೆ ಇಂದು ಬೆಳಗಿನ ಜಾವ ಮುಂಬೈಯ ಪಲ್ಗರ್ ಪ್ರದೇಶದಲ್ಲಿ 4 ಗಂಟೆಯಿಂದ 5 ಗಂಟೆಯವರೆಗೆ ಅಂದರೆ 1 ಗಂಟೆಯಲ್ಲಿ 100 ಮಿಲಿ ಮೀಟರ್ ನಷ್ಟು ಮಳೆ ಸುರಿದಿರುವುದು ದಾಖಲಾಗಿದೆ.

“ಪಶ್ಚಿಮ ರೈಲ್ವೇ ವಿಭಾಗದ 13 ರೈಲುಗಳ ಸಂಚಾರವನ್ನು ಇಂದು ಮಳೆಯ ಕಾರಣದಿಂದ ರದ್ದುಪಡಿಸಲಾಗಿದೆ” ಎಂದು ಎಎನ್‍ಐ ವರದಿ ಮಾಡಿದೆ.

ಪಾಲ್ಗಾಟ್ ಪ್ರದೇಶದ ರೈಲ್ವೆ ಹಳಿಗಳು ಜಲಾವೃತಗೊಂಡಿದ್ದರಿಂದ ಮುಂಬೈ-ವಲ್ಸಾಡ್-ಸೂರತ್ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಎರಡು ದಿನದಲ್ಲಿ ಬರೋಬ್ಬರಿ 500 ಮಿ.ಮಿ ಗಿಂತ ಹೆಚ್ಚು ಮಳೆಯಾಗಿದ್ದು, ನಗರದ ಬಹುತೇಕ ರಸ್ತೆಗಳಲ್ಲಿ ನೀರು ನಿಂತಿದ್ದು, ಟ್ರಾಫಿಕ್ ಜಾಮ್ ಉಂಟಾಗಿದೆ. ಹೀಗಾಗಿ ಟ್ರಾಫಿಕ್ ನಿಯಂತ್ರಿಸಲು 500ಕ್ಕೂ ಅಧಿಕ ಸಂಚಾರಿ ಪೊಲೀಸರು ಕರ್ತವ್ಯದಲ್ಲಿ ನಿರತರಾಗಿದ್ದಾರೆ ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

ರೈಲ್ವೇ ಹಳಿಗಳ ಮೇಲೂ ನೀರು ನಿಂತಿರುವುದರಿಂದ ಪಲ್ಗರ್ ಮಾರ್ಗದಲ್ಲಿ ಸಂಚರಿಸುವ ರೈಲುಗಳು ಗಂಟೆಗೆ 30 ಕಿ.ಮಿ ವೇಗದಲ್ಲಿ ಮಾತ್ರ ಚಲಿಸಬೇಕು ಎಂದು ರೈಲ್ವೇ ಇಲಾಖೆ ಸೂಚಿಸಿದೆ.

ಖಾಸಗಿ ಹವಾಮಾನ ವರದಿ ಪ್ರಕಾರ, ಜುಲೈ 3ರ ರಾತ್ರಿಯಿಂದ ಮಳೆ ಹೆಚ್ಚಾಗಲಿದ್ದು, ಬಂಗಾಳ ಕೊಲ್ಲಿಯಿಂದ ಆರಂಭಗೊಂಡು ಪಶ್ಚಿಮ ಘಟ್ಟದತ್ತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

Comments

Leave a Reply

Your email address will not be published. Required fields are marked *