ಬೆಂಗ್ಳೂರಿನಲ್ಲಿ ಮಾನವೀಯತೆ ಮೆರೆದ ಟ್ರಾಫಿಕ್ ಪೊಲೀಸ್

ಬೆಂಗಳೂರು: ಪೊಲೀಸರು ತಮ್ಮ ಕೈಲಾದ ಸಹಾಯವನ್ನು ಸಾರ್ವಜನಿಕರಿಗೆ ಮಾಡುತ್ತಿದ್ದು, ಆಗಾಗ ಸುದ್ದಿಯಾಗುತ್ತಿರುತ್ತಾರೆ. ಈಗ ಟ್ರಾಫಿಕ್ ಪೊಲೀಸ್ ಮಳೆಗೆ ಸಿಲುಕಿದ್ದ ಮಹಿಳೆಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಹೌದು. ಬನಶಂಕರಿ ಟ್ರಾಫಿಕ್ ಪೊಲೀಸರೊಬ್ಬರು ಮಾನವೀಯತೆ ಮೆರೆಯುವ ಮೂಲಕ ಇದೀಗ ಸುದ್ದಿಯಾಗಿದ್ದಾರೆ. ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಸಂಜೆ ವೇಳೆ ಮಳೆಯಾಗುತ್ತಿದೆ. ಹೀಗೆ ಮಳೆಯಲ್ಲಿ ಸಿಲುಕಿದ್ದ ಮಹಿಳೆಗೆ ಸಂಚಾರಿ ಪೊಲೀಸ್ ಒಬ್ಬರು ಸಹಾಯ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರಿಂದ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ.

ಈ ಘಟನೆ ಬನಶಂಕರಿ ರಸ್ತೆಯ ನೈಸ್ ರೋಡ್ ಜಂಕ್ಷನ್ ಬಳಿ ನಡೆದಿದೆ. ಸಂಚಾರಿ ಪೊಲೀಸ್ ಸಹಾಯ ಮಾಡುತ್ತಿದ್ದಾಗ ಫೋಟೋ ತೆಗೆದು ಅದನ್ನು ಪ್ರದೀಪ್ ಕುಮಾರ್ ಅವರು ತಮ್ಮ ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದು, ನಡೆದ ಘಟನೆಯ ಬಗ್ಗೆ ವಿವರಿಸಿದ್ದಾರೆ.

ಫೇಸ್‍ಬುಕ್ ಪೋಸ್ಟ್ ನಲ್ಲಿ ಏನಿದೆ?
`ಭಾನುವಾರ ಬನಶಂಕರಿ ರಸ್ತೆಯಲ್ಲಿ ಅತಿಯಾಗಿ ಮಳೆ ಸುರಿಯುತ್ತಿತ್ತು. ಈ ವೇಳೆ ನಾನು ಬನಶಂಕರಿಯ ಔಟರ್ ರಿಂಗ್ ರೋಡ್ ಬಳಿ ನಿಂತಿದ್ದೆ. ಆಗ ಮಳೆಯಲ್ಲಿ ಮಹಿಳೆಯೊಬ್ಬರು ಎರಡು ವರ್ಷದ ಮಗುವನ್ನ ಕೂರಿಸಿಕೊಂಡು ಸ್ಕೂಟಿ ಓಡಿಸುತ್ತಿದ್ದರು. ಅತಿಯಾದ ಮಳೆಯಿಂದಾಗಿ ಸಿಗ್ನಲ್ ಬಳಿ ಮಗುವಿನ ಜೊತೆ ಗಾಡಿಯನ್ನು ನಿಯಂತ್ರಿಸಲು ಸಾಧ್ಯವಾಗದೆ ಮಹಿಳೆ ಪರದಾಡುತ್ತಿದ್ದರು. ಇದನ್ನು ಗಮನಿಸಿದ ಟ್ರಾಫಿಕ್ ಪೊಲೀಸ್ ಮಹಿಳೆಗೆ ಛತ್ರಿ ನೀಡಿದ್ದು, ಬಳಿಕ ಯಾವುದೇ ಹಿಂಜರಿಕೆ ಇಲ್ಲದೆ ಮಹಿಳೆಯ ಗಾಡಿಯನ್ನು ತಾವೇ ಕೈಯಿಂದ ತಳ್ಳಿಕೊಂಡು ಬಂದು ಸುರಕ್ಷಿತ ಜಾಗದಲ್ಲಿ ನಿಲ್ಲಿಸಿದ್ದಾರೆ. ಜೊತೆಗೆ ಮಹಿಳೆ ಮತ್ತು ಮಗುವನ್ನು ಕೂಡ ಸುರಕ್ಷಿತವಾಗಿ ತಲುಪಿಸಿದ್ದಾರೆ’ ಅಂತ ಪ್ರದೀಪ್ ಕುಮಾರ್ ತನ್ನ ಫೇಸ್ ಬುಕ್ ನಲ್ಲಿ ಬರೆದುಕೊಳ್ಳುವ ಮೂಲಕ ಟ್ರಾಫಿಕ್ ಪೊಲೀಸ್ ಕೆಲಸವನ್ನು ಶ್ಲಾಘಿಸಿದ್ದಾರೆ.

ಯುವಕ ಮಾಡಿದ್ದ ಪೋಸ್ಟ್ ನೋಡಿ ಬೆಂಗಳೂರು ಸಿಟಿ ಪೊಲೀಸರು ಆ ಪೋಸ್ಟ್ ಅನ್ನು ಟ್ವಿಟ್ಟರ್ ನಲ್ಲಿ ಹಾಕಿ “ಬಿಸಿಲಿರಲಿ-ಮಳೆಯಿರಲಿ ನಾವಿರುವುದೇ ನಿಮಗಾಗಿ ನಿಮ್ಮ ಸೇವೆಗಾಗಿ” ಎಂದು ಬರೆದುಕೊಂಡಿದ್ದಾರೆ. ಪೊಲೀಸರು ಈ ಬಗ್ಗೆ ಟ್ವೀಟ್ ಮಾಡಿದ ಬಳಿಕ ಸಾರ್ವಜನಿಕ ವಲಯದಿಂದ ಸಂಚಾರಿ ಪೊಲೀಸ್ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *