ಫೋನ್‍ಪೇಯಿಂದ ಹಣ ಕೀಳ್ತಾರೆ – ಪಬ್ಲಿಕ್ ಕ್ಯಾಮೆರಾ ಕಂಡ ಕೂಡ್ಲೇ ಓಡ್ತಾರೆ ಟ್ರಾಫಿಕ್ ಪೊಲೀಸ್ರು

ಬೆಂಗಳೂರು: ಕೆಲ ಟ್ರಾಫಿಕ್ ಪೊಲೀಸರು ದುಬಾರಿ ದಂಡವನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ದಂಡದ ಹೆಸರಲ್ಲಿ ವಾಹನ ಸವಾರರ ಬಳಿ ಹಗಲು ದರೋಡೆಗೆ ಇಳಿದಿದ್ದಾರೆ. ಪ್ರಶ್ನೆ ಮಾಡಿದರೆ ಟ್ರಾಫಿಕ್ ಪಿಎಸ್‍ಐ ಧಮ್ಕಿ ಹಾಕುತ್ತಾರೆ. ಟ್ರಾಫಿಕ್ ಪೊಲೀಸರ ವರ್ತನೆಗೆ ಜನರು ಬಿಲ್ ಇಲ್ಲದೆ ಫೈನ್ ಕಟ್ಟುತ್ತಿದ್ದಾರೆ.

ಹೌದು. ಬೆಂಗಳೂರಿನಲ್ಲಿ ಕೆಲ ಟ್ರಾಫಿಕ್ ಪೊಲೀಸರು ದುಬಾರಿ ದಂಡವನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಸಿಕ್ಕಿದ್ದೇ ಚಾನ್ಸ್ ಎಂಬಂತೆ ವಾಹನ ಸವಾರರ ಬಳಿ ಬಂದಷ್ಟು ದೋಚಿಕೊಳ್ಳಲು ಮುಂದಾಗಿದ್ದಾರೆ. ಮಲ್ಲೇಶ್ವರಂ ಟ್ರಾಫಿಕ್ ಪಿಎಸ್‍ಐ ಹಾಗೂ ಗ್ಯಾಂಗ್ ಹಗಲು ದರೋಡೆ ಪಬ್ಲಿಕ್ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ದಂಡದ ಮೊತ್ತವನ್ನು ಫೋನ್‍ಪೇ ಮಾಡಿಸಿಕೊಳ್ಳುವ ಕಾನೂನು ಯಾವಾಗ ಬಂತು ಎಂದು ಪ್ರಶ್ನೆ ಮಾಡಿದ್ದೆ ತಡ, ಮಲ್ಲೇಶ್ವರಂ ಟ್ರಾಫಿಕ್ ಪಿಎಸ್‍ಐ ಕೋಪಗೊಂಡಿದ್ದಾರೆ. ಅಲ್ಲದೆ ನಮ್ಮನ್ನೇ ಪ್ರಶ್ನೆ ಮಾಡುತ್ತೀಯಾ ಬಂದ ಕೆಲಸವನ್ನು ಮಾಡಿಕೊಂಡು ಹೋಗಿ, ಇಲ್ಲ ಹೊಯ್ಸಳ ಕರೆಸಿ ಒದ್ದು ಒಳಗಡೆ ತಳ್ಳ ಬೇಕಾಗುತ್ತದೆ ಎಂದು ಧಮ್ಕಿ ಹಾಕಲು ಮುಂದಾಗಿದ್ದಾರೆ. ಅಲ್ಲದೆ ಒಬ್ಬ ವಾಹನ ಸವಾರ ಪ್ರಶ್ನೆ ಮಾಡಿದ ಎನ್ನುವ ಕಾರಣಕ್ಕೆ ಕತ್ತಿನ ಪಟ್ಟಿ ಹಿಡಿದು ಪೊಲೀಸ್ ಠಾಣೆಗೆ ಬಿಟ್ಟು ಬಂದಿದ್ದಾರೆ.

ಮಲ್ಲೇಶ್ವರಂ ಟ್ರಾಫಿಕ್ ಪಿಎಸ್‍ಐ ಪಕ್ಕದಲ್ಲಿಯೇ ಇದ್ದುಕೊಂಡು ಮಹಿಳೆಯರು, ಪಿಎಸ್‍ಐ ಪಟಾಲಂ ಕಡೆಯಿಂದ ಫೋನ್‍ಪೇ ಮೂಲಕ ದಂಡದ ಹಣ ವಸೂಲಿ ಮಾಡಿಸುತ್ತಾರೆ. ಇದನ್ನು ಪಬ್ಲಿಕ್ ಟಿವಿ ಚಿತ್ರೀಕರಿಸಲು ಹೋದಾಗ ಫೋನ್‍ಪೇ ಮುಖಾಂತರ ದಂಡದ ಹಣ ಪಾವತಿಸಿಕೊಳ್ಳುತ್ತಿದ್ದ ಮಲ್ಲೇಶ್ವರಂ ಪಿಎಸ್‍ಐ ಗ್ಯಾಂಗ್ ಸದಸ್ಯರು ಕಾಂಪೌಂಡ್ ಹಾರಿ ಪರಾರಿಯಾಗಿದ್ದಾರೆ. ಗ್ಯಾಂಗ್ ನ ಸದ್ಯಸರು ಎಸ್ಕೇಪ್ ಆಗುತ್ತಿದ್ದಂತೆಯೇ ಮಲ್ಲೇಶ್ವರಂ ಟ್ರಾಫಿಕ್ ಪಿಎಸ್‍ಐ ಕೂಡ ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಂಡು ಜಾಗ ಖಾಲಿ ಮಾಡಿದ್ದಾರೆ.

ಟ್ರಾಫಿಕ್ ಪೊಲೀಸರಿಗೆ ಮರು ಪ್ರಶ್ನೆ ಮಾಡಿದರೆ ರೇಗಾಡಿದ್ದಾರೆ. ಟ್ರಾಫಿಕ್ ಪೊಲೀಸರು ವಾಹನ ಸವಾರರ ಜೊತೆ ಮಾತಿನ ಚಕಮಕಿಗೆ ಇಳಿದರೆ ಸಾಕು ಟೋಯಿಂಗ್ ಹುಡುಗರು ರೌಡಿಗಳ ರೀತಿಯಲ್ಲಿ ವರ್ತಿಸಲು ಶುರು ಮಾಡಿಕೊಳ್ಳುತ್ತಾರೆ. ಅಮಾಯಕ ವಾಹನ ಸವಾರರು ಇವರ ಅವಾಂತರ ಕಂಡು ಕೆಸರಲ್ಲಿ ಕಲ್ಲು ಹಾಕಿದರೆ ನಮ್ಮ ಮೇಲೆ ಸಿಡಿಯೋದು ಎಂದುಕೊಂಡು ಫೋನ್‍ಪೇ, ಗೂಗಲ್‍ಪೇನೋ ಏನೋ ಮಾಡಿ ಹೋಗುತ್ತಿರುತ್ತಾರೆ.

Comments

Leave a Reply

Your email address will not be published. Required fields are marked *