ತಮಿಳುನಾಡಿನಲ್ಲಿ ಮಳೆ ಅವಾಂತರ – 15 ಸಾವು, ಒಂದು ಸಾವಿರಕ್ಕೂ ಹೆಚ್ಚು ಮನೆಗಳು ನಾಶ

ಚೆನ್ನೈ: ತಮಿಳುನಾಡಿನಲ್ಲಿ ಕುಂಭದ್ರೋಣ ಮಳೆಯು ಅವಾಂತರ ಸೃಷ್ಟಿಸಿದ್ದು, ಸಾವಿನ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ರಾಜ್ಯಾದ್ಯಂತ 1,000ಕ್ಕೂ ಹೆಚ್ಚು ಗುಡಿಸಲು ಹಾಗೂ ಮನೆಗಳು ನಾಶವಾಗಿದ್ದು, ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.

Chennai rain

ಬಂಗಾಳಕೊಲ್ಲಿಯ ವಾಯುಭಾರ ಕುಸಿತದಿಂದಾಗಿ ಕೆಲವು ದಿನಗಳಿಂದ ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿದೆ. ಇನ್ನೂ ಗುರುವಾರ ತಡರಾತ್ರಿ ಎಡಬಿಡದೇ ಸುರಿದ ಮಳೆಯಿಂದಾಗಿ ಚೆನ್ನೈನ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, 75,000ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಮತ್ತು ಇತರ ಸರ್ಕಾರಿ ಅಧಿಕಾರಿಗಳು ನಾಗರಿಕರಿಗೆ ಸಹಾಯ ಮಾಡುತ್ತಿದ್ದಾರೆ. ಇದನ್ನೂ ಓದಿ: ಎಥೆನಾಲ್ ಉತ್ಪಾದನೆಗೆ ಮುಂದಾದ ಕೇಂದ್ರ ಸರ್ಕಾರ

ಚೆನ್ನೈ ಮಹಾನಗರ ಸಂಪೂರ್ಣ ದ್ವೀಪದಂತಾಗಿದ್ದು, 500ಕ್ಕೂ ಹೆಚ್ಚು ಪ್ರದೇಶಗಳು ಜಲಾವೃತವಾಗಿದೆ. ರಸ್ತೆ, ಮನೆ, ಅಂಗಡಿ, ಕಾರ್ಖಾನೆಗಳಿಗೆ ನೀರು ನುಗ್ಗಿದ್ದು, ಜನ ನೀರನ್ನು ಹೊರ ಹಾಕಲು ಪರದಾಡುತ್ತಿದ್ದಾರೆ. ಅಲ್ಲದೇ ಚೆನ್ನೈನಲ್ಲಿ ಇಂದೂ ಕೂಡ ಶಾಲಾ ಕಾಲೇಜ್‍ಗಳಿಗೆ ರಜೆ ಘೋಷಿಸಲಾಗಿದೆ. ಗುರುವಾರ ಸಂಜೆಯಿಂದ ಏರ್‌ಪೋರ್ಟ್‌ನಲ್ಲಿ ಕಾರ್ಯಾರಂಭಗೊಳಿಸಲಾಗಿದೆ.

ಚೆನ್ನೈನ ಬಹುತೇಕ ಬಡಾವಣೆಗಳು ಜಲಾವೃತವಾಗಿದ್ದು, ಮನೆಗಳಲ್ಲಿ ಮೊಣಕಾಲುದ್ದ ನೀರು ನುಗ್ಗಿದೆ. ಅಲ್ಲದೇ ಚೆನ್ನೈನ ಚಕ್ರವರ್ತಿ ನಗರ, ಬೆಸೆಂಟ್ ನಗರ, ಕೆಎಂ ಗಾರ್ಡನ್, ವಡಪಳನಿ, ಕೊಯಮತ್ತೂರೂಗೆ ಸಂಪರ್ಕಿಸುವ ರಸ್ತೆ ಧಾರಾಕಾರ ಮಳೆಯಿಂದಾಗಿ ಕೆರೆಯಂತಾಗಿದ್ದು, ರಸೆಯಲ್ಲಿ ಟ್ರಾಫಿಕ್ ಜಾಮ್ ಉಂಟಾದ ಕಾರಣ ಜನರು ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿದ್ದಾರೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಗುಡುಗು ಸಹಿತ ಭಾರೀ ಮಳೆ – 20 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಮಳೆಯಿಂದಾಗಿ 100 ಬೆಡ್‍ಗಳು ಜಲಾವೃತವಾಗಿದೆ. ಆಸ್ಪತ್ರೆಯೊಳಗೆ ಮೊಣಕಾಲುದ್ದ ನೀರು ನಿಂತ ಪರಿಣಾಮ ರೋಗಿಗಳು, ಆಸ್ಪತ್ರೆ ಸಿಬ್ಬಂದಿ ಪರದಾಡುವಂತಾಯಿತು ಮತ್ತು 20 ರೋಗಿಗಳನ್ನು ವಿವಿಧ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಯಿತು. ಮಾಮಲ್ಲಪುರಂ ಬೀಚ್ ಬಳಿ ಇರುವ ದೇವಾಲಯ ಕೂಡ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಚೆನ್ನೈನ ದೊರೈಸ್ವಾಮಿ, ಸೈದಾ ಪೇಟೆಯಲ್ಲಿ ರಸ್ತೆಗಳೆಲ್ಲ ನದಿಯಂತೆ ಕಂಗೊಳಿಸುತ್ತಿದ್ದವು. ಅಂಡರ್ ಪಾಸ್ ಸಂಪೂರ್ಣ ನೀರಿನಿಂದ ಮುಳುಗಡೆಗೊಂಡಿದೆ. ಪೆಟ್ರೋಲ್ ಬಂಕ್‍ಗಳಿಗೂ ಮಳೆ ನೀರು ನುಗ್ಗಿದೆ. ಮಧ್ಯರಾತ್ರಿ ವೇಗವಾಗಿ ಬಂದ ಕಾರ್‍ವೊಂದು ನೀರಿನಲ್ಲಿ ಸಿಲುಕಿಕೊಂಡು ಪರದಾಡುವಂತಾಯಿತು. ಆದರೆ ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾದರು.

ಮಳೆಯಿಂದಾಗಿ ಚೆನ್ನೈನಲ್ಲಿರುವ ಮದ್ರಾಸ್ ಹೈಕೋರ್ಟ್‍ನ ಆವರಣ ಕೂಡ ಜಲಾವೃತವಾಗಿದೆ ಮತ್ತು ಶ್ರೀಹರಿಕೋಟಾ-ಸುಲ್ಲೂರ್‍ಪೇಟ್ ರಸ್ತೆಯ ಪುಲಿಕಾಟ್ ನದಿ ಉಕ್ಕಿ ಹರಿದಿದೆ. ಉತ್ತರ ಚೆನ್ನೈನಲ್ಲಿ ಬಂಗಾಳಕೊಲ್ಲಿ ಪ್ರಕ್ಷುಬ್ಧವಾಗಿದ್ದು, ಭಾರೀ ಗಾಳಿಯೊಂದಿಗೆ ಅಲೆಗಳು ರಸ್ತೆಗೆ ಅಪ್ಪಳಿಸುತ್ತಿವೆ. ಎನ್‌ಡಿಆರ್‌ಎಫ್ ತಂಡ ಚೆಂಗಲ್‍ಪೇಟೆಯ ತಿರುಪ್ಪೂರ್‌ನಲ್ಲಿ ರಾತ್ರಿಯೆಲ್ಲಾ ಕಾರ್ಯಾಚರಣೆ ನಡೆಸುವ ಮೂಲಕ ಪ್ರವಾಹದಿಂದ ಹೈಟೆನ್ಷನ್ ಕಂಬ ಏರಿದ್ದ ನಾಲ್ವರನ್ನು ರಕ್ಷಿಸಿದೆ. ಚೆನ್ನೈ ಸೇರಿದಂತೆ ಮಳೆ ಪೀಡಿತ ತಮಿಳುನಾಡಿನ ಬಹುತೇಕ ಭಾಗಗಳಲ್ಲಿ ಎನ್‌ಡಿಆರ್‌ಎಫ್ ತಂಡ ಜನರ ರಕ್ಷಣೆ ಮಾಡುತ್ತಿದೆ. ಮತ್ತೊಂದು ಕಡೆ ತಿರುವಳ್ಳೂರ್‌ನಲ್ಲಿ ಧರೆಗೆ ಉರುಳಿದ್ದ ಮರಗಳನ್ನು ತೆರವುಗೊಳಿಸಿದೆ.

ಚೆನ್ನೈ ಮಳೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಸುಮಾರು 28 ವರ್ಷದ ವ್ಯಕ್ತಿಯನ್ನು ಟಿಪಿ ಚಾತ್ರಂ ಠಾಣೆ ಇನ್ಸ್‌ಪೆಕ್ಟರ್‌ ರಾಜೇಶ್ವರಿ ಖುದ್ದು ಹೆಗಲ ಮೇಲೆ ಹೊತ್ತುಕೊಂಡು, ಇವನ ಉಸಿರಿದೆ. ಇವನನ್ನು ಉಳಿಸಿಕೊಳ್ಳಬೇಕು ಅಂತ ಆಟೋ ಮೂಲಕ ಆಸ್ಪತ್ರೆಗೆ ಸಾಗಿಸಿದರು. ರಾಜೇಶ್ವರಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.  ಇದನ್ನೂ ಓದಿ: ಯಮುನಾ ನದಿಯಲ್ಲಿ ವಿಷಕಾರಿ ನೊರೆ – ಜನರಲ್ಲಿ ಆತಂಕ

ಸದ್ಯ ಇಂದಿನಿಂದ ಬಂಗಾಳಕೊಲ್ಲಿಯ ವಾಯುಭಾರ ಕುಸಿತ ದುರ್ಬಲಗೊಳ್ಳಲಿದ್ದು, ಮಳೆ ಪ್ರಮಾಣ ಇಳಿಮುಖಗೊಳ್ಳಲಿದೆ. ಈಗ ಮಳೆ ಕಡಿಮೆಯಾದರೂ ಮತ್ತೆ ನವೆಂಬರ್ 13ಕ್ಕೆ ಅಂಡಮಾನ್ ದ್ವೀಪಗಳ ಬಳಿ ವಾಯುಭಾರ ಕುಸಿತಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಇನ್ನಷ್ಟು ದಿನ ತಮಿಳುನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ.

Comments

Leave a Reply

Your email address will not be published. Required fields are marked *