ವ್ಯಾಪಾರ ಮಾತುಕತೆಗೆ ಮತ್ತೆ ವೇದಿಕೆ ಸಿದ್ದ- ಇಂದು ಭಾರತಕ್ಕೆ ಬರುತ್ತಿದ್ದಾರೆ ಅಮೆರಿಕ ಪ್ರತಿನಿಧಿ

ನವದೆಹಲಿ: ಅಮೆರಿಕ (USA) ಮತ್ತು ಭಾರತ (India) ನಡುವೆ ವ್ಯಾಪಾರ ಮಾತುಕತೆಗೆ (Trade Talk) ಮತ್ತೆ ವೇದಿಕೆ ಸಿದ್ಧವಾಗಿದೆ.

ಅಮೆರಿಕದ ವ್ಯಾಪಾರ ಪ್ರತಿನಿಧಿಯಾಗಿರುವ ಬ್ರೆಂಡನ್ ಲಿಂಚ್, ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ (BTA)ಮಾತುಕತೆಗಾಗಿ ಇಂದು ರಾತ್ರಿ ಭಾರತಕ್ಕೆ ಆಗಮಿಸಲಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಟ್ರಂಪ್‌ (Donald Trump) ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಭಾರತ ಅಮೆರಿಕದ ನಡುವಿನ ವ್ಯಾಪಾರ ಮಾತುಕತೆ ಆರಭವಾಗಿತ್ತು. ಆದರೆ ಕೃಷಿ ಮತ್ತು ಹಾಲಿನ ಉತ್ಪನ್ನ ಮಾರಾಟಕ್ಕೆ ಅಮೆರಿಕ ಬಹಳ ಪಟ್ಟು ಹಿಡಿದಿತ್ತು. ಅಮೆರಿಕದ ಈ ಬೇಡಿಕೆಗೆ ಭಾರತದ ಮಣಿದಿರಲಿಲ್ಲ.

ಮಾತುಕತೆ ವಿಫಲವಾದ ಬೆನ್ನಲ್ಲೇ ಟ್ರಂಪ್‌ ಭಾರತದಿಂದ ಆಮದಾಗುವ ಕೆಲ ವಸ್ತುಗಳಿಗೆ 25% ತೆರಿಗೆ ವಿಧಿಸಿದ್ದರು. ಇದಾದ ಬಳಿಕ ರಷ್ಯಾದಿಂದ (Russia) ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಕ್ಕೆ ದಂಡವಾಗಿ 25% ಸುಂಕ ಹೇರಿದ್ದಾರೆ. ಪರಿಣಾಮ ಈಗ ಭಾರತದಿಂದ ಅಮೆರಿಕಕ್ಕೆ ಆಮದಾಗುವ ಕೆಲ ವಸ್ತುಗಳಿಗೆ 50% ಸುಂಕ ವಿಧಿಸಲಾಗಿದೆ. ಇದನ್ನೂ ಓದಿ:  Explained| ದಿಢೀರ್‌ ಟ್ರಂಪ್‌ಗೆ ಭಾರತದ ಮೇಲೆ ಪ್ರೀತಿ ಬಂದಿದ್ದು ಯಾಕೆ? ಅಮೆರಿಕದ ʼವರಿʼ ಏನು?

ಸುಂಕ ಹೇರಿದಕ್ಕೆ ಅಮೆರಿಕದಲ್ಲಿ ಭಾರೀ ಟೀಕೆ ಬರುತ್ತಿದ್ದಂತೆ ಟ್ರಂಪ್‌ ತನ್ನ ವರಸೆ ಬದಲಾಯಿಸಿದ್ದಾರೆ. ಭಾರತವನ್ನು ಡೆಡ್‌ ಎಕಾನಮಿ ಎಂದು ಕರೆದಿದ್ದ ಟ್ರಂಪ್‌ ಈಗ ಪ್ರಧಾನಿ ನರೇಂದ್ರ ಮೋದಿ (Narendra Modi) ನನ್ನ ಸ್ನೇಹಿತ. ಅವರ ಜೊತೆ ಮಾತನಾಡಲು ಎದುರು ನೋಡುತ್ತೇನೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಒಂದೇ ವಾರದಲ್ಲಿ ಎರಡು ಬಾರಿ ಮೋದಿ ನನ್ನ ಸ್ನೇಹಿತ ಎಂದು ಕರೆಯುವ ಮೂಲಕ ವಿಶ್ವಕ್ಕೆ ಅಚ್ಚರಿ ನೀಡಿದ್ದರು.

ಮತ್ತೊಂದು ಕಡೆ ಕೇಂದ್ರ ಸಚಿವ ಪಿಯೂಶ್‌ ಗೋಯಲ್‌ ನವೆಂಬರ್‌ ವೇಳೆಗೆ ಭಾರತ ಅಮೆರಿಕದ ಮಧ್ಯೆ ವ್ಯಾಪಾರ ಮಾತುಕತೆ ಅಂತಿಮವಾಗಬಹುದು ಎಂದು ಈ ಹಿಂದೆ ತಿಳಿಸಿದ್ದರು.