ಉತ್ತರಪ್ರದೇಶದಲ್ಲಿ ಹಳಿ ತಪ್ಪಿದ ರೈಲು: ಸಾವಿನ ಸಂಖ್ಯೆ 23ಕ್ಕೆ ಏರಿಕೆ

ಲಕ್ನೋ: ಮಕ್ಕಳ ಮಾರಣಹೋಮದ ಬಳಿಕ ಉತ್ತರಪ್ರದೇಶ ಮತ್ತೊಂದು ದುರಂತಕ್ಕೆ ಸಾಕ್ಷಿಯಾಗಿದೆ. ಮುಜಾಫರ್‍ನಗರ ಖತೌಲಿ ಬಳಿ ಕಳಿಂಗ ಉತ್ಕಲ್ ಎಕ್ಸ್ ಪ್ರೆಸ್ ರೈಲು ಹಳಿತಪ್ಪಿದೆ. ಘಟನೆಯಲ್ಲಿ 23 ಮಂದಿ ಸಾವನ್ನಪ್ಪಿದ್ದು, 72ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಒಡಿಶಾದ ಪುರಿಯಿಂದ ಹರಿದ್ವಾರಕ್ಕೆ ಹೊರಟಿದ್ದ ರೈಲಿನ 14 ಬೋಗಿಗಳು ಶನಿವಾರ ಸಂಜೆ 5.45ರ ಸುಮಾರಿಗೆ ಹಳಿತಪ್ಪಿದೆ. ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಗಾಯಾಳುಗಳನ್ನು ಮೀರತ್‍ನ ಆಸ್ಪತ್ರೆಗೆ ರವಾನಿಸಲಾಗಿದೆ.

ಮೃತರ ಕುಟುಂಬಗಳಿಗೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಲಾ 2 ಲಕ್ಷ, ಗಾಯಾಳುಗಳಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಒಡಿಶಾ ಸರ್ಕಾರದಿಂದಲೂ ಮೃತರಿಗೆ ಪರಿಹಾರ ಘೋಷಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಮಾನಾಥ್ ಕೋವಿಂದ್ ಹಾಗೂ ರಾಹುಲ್ ಗಾಂಧಿ ಮತ್ತಿತರ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರೈಲ್ವೆ ಸಚಿವ ಸುರೇಶ್ ಪ್ರಭು ಕೂಡ ಸಂತಾಪ ವ್ಯಕ್ತಪಡಿಸಿದ್ದು, ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ. ಜೊತೆಗೆ ಮೃತರ ಕುಟುಂಬಗಳಿಗೆ 3.25 ಲಕ್ಷ, ಗಂಭೀರವಾಗಿ ಗಾಯಗೊಂಡವರಿಗೆ 50 ಸಾವಿರ, ಸಣ್ಣಪುಟ್ಟ ಗಾಯಗಳಾದವರಿಗೆ 25 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಈ ಮಧ್ಯೆ ಅಧಿಕಾರಿಗಳ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ. ದುರ್ಘಟನೆ ಸಂಭವಿಸಿದ ಸ್ಥಳದಲ್ಲಿ ಕಾಮಗಾರಿ ನಡೆಯುತ್ತಿತ್ತು. ಆದ್ರೆ ರೈಲು ಬರುವಾಗ ಕೆಂಪು ಬಾವುಟ, ಸಿಗ್ನಲ್ ಸೂಚಿಸದೆ ರೈಲ್ವೆ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದರು ಅಂತಲೂ ಹೇಳಲಾಗುತ್ತಿದೆ.

ಕಳೆದ ವರ್ಷ ನವೆಂಬರ್‍ನಲ್ಲಿ ಕಾನ್ಪುರದಲ್ಲಿ ಇಂದೋರ್-ಪಾಟ್ನಾ ರೈಲು ಹಳಿ ತಪ್ಪಿ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ರು.

Comments

Leave a Reply

Your email address will not be published. Required fields are marked *