ಪ್ರವಾಸಿಗರ ಸ್ವರ್ಗ ಕಾಫಿನಾಡಿನ 9 ಗುಡ್ಡಗಳ ನಡುವಿನ ‘ಎತ್ತಿನಭುಜ’

ಚಿಕ್ಕಮಗಳೂರು: ಎಲ್ಲಾ ಸೌಂದರ್ಯವನ್ನೂ ನಾಚಿಸುವಂತಹ ಅಮೋಘ ರೂಪರಾಶಿಯನ್ನು ತನ್ನಲ್ಲಿಯೇ ಇಟ್ಟುಕೊಂಡ ರಾಜ್ಯದ ಎತ್ತರದ ಶಿಖರದಲ್ಲಿ ಒಂದಕ್ಕೊಂದು ಅಂಟಿಕೊಂಡಿರೋ 9 ಗುಡ್ಡಗಳು ಇವೆ. ಈ ಗುಡ್ಡಗಳ ಮಧ್ಯೆ ಇರುವ ರೋಮಾಂಚಕಾರಿ ಅಡ್ವೆಂಚರಸ್ ಟ್ರಕ್ಕಿಂಗ್ ಸ್ಪಾಟ್‍ಗೆ ಪ್ರವಾಸಿಗರು ಬರದೇ ಇರುವ ದಿನವಿಲ್ಲ. ಅಪರೂಪದ ಸೌಂದರ್ಯ ಬಣ್ಣಿಸೋಕೆ ಪದಪುಂಜವೇ ಸಾಲದಂತಹ ಪ್ರವಾಸಿ ತಾಣವೊಂದು ಕಾಫಿನಾಡಿನಲ್ಲಿದೆ.

ಹೌದು. ಕಾಫಿನಾಡು ಚಿಕ್ಕಮಗಳೂರು ಪ್ರವಾಸಿಗರ ಪಾಲಿನ ಅಕ್ಷಯಪಾತ್ರೆ ಇದ್ದಂತೆ. ಇಲ್ಲಿನ ನಿಸರ್ಗ ವೈಭವ ನೋಡುಗರ ಕಣ್ಮನ ತಣಿಸುತ್ತದೆ. ಭೂಲೋಕದ ಸ್ವರ್ಗವೆನಿಸಿರೋ ಈ ನೆಲದಲ್ಲಿ ಮೂಡಿಗೆರೆಯ ಶಿಶಿಲಗುಡ್ಡ ಕೂಡ ಒಂದು. ದೂರದಿಂದ ನೋಡಿದರೆ ಇದು ಎತ್ತಿನಭುಜದಂತೆ ಕಾಣುತ್ತೆ, ಹೀಗಾಗಿ ಈ ಗುಡ್ಡವನ್ನು ಎತ್ತಿನಭುಜ ಅಂತ ಕರೀತಾರೆ. ಬೈರಾಪುರದಿಂದ 4 ಕಿ.ಮೀ ದೂರದಲ್ಲಿರೋ ಈ ಬೆಟ್ಟವನ್ನು ನಡೆದೇ ಏರಬೇಕು. ಕಡಿದಾದ ರಸ್ತೆಯಲ್ಲಿ ಕಲ್ಲು-ಮಣ್ಣು ಎನ್ನದೇ ಗುಡ್ಡ ಹತ್ತಬೇಕು. ಸಿಕ್ಕಾಪಟ್ಟೆ ಕಷ್ಟಪಟ್ಟು ಬೆಟ್ಟ ಏರಿದರೆ ಅಪರೂಪದ ನಿಸರ್ಗ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.

9 ಗುಡ್ಡಗಳ ಮಧ್ಯೆ ಇರೋ ಎತ್ತಿನಭುಜದ ಬೆಟ್ಟದ ಮಧ್ಯೆ ನಿಂತರೆ ಯಾವುದೋ ದ್ವೀಪದಲ್ಲಿ ನಿಂತ ಹಾಗೆ ಆಗುತ್ತೆ. ಈ ಗುಡ್ಡವನ್ನ ಹತ್ತಿ ಇಳಿಯುವುದೇ ಪ್ರವಾಸಿಗರಿಗೆ ಒಂದು ರೀತಿ ಖುಷಿಕೊಡುತ್ತದೆ. ಬೆಟ್ಟ ಹತ್ತುವಾಗ ಬೀಸೋ ತಣ್ಣನೆಯ ಗಾಳಿ ಎಂತಹ ಆಯಾಸವನ್ನೂ ಇಲ್ಲವಾಗಿಸುತ್ತದೆ. ಹಾಗೆಯೇ ಬೆಟ್ಟ ಹತ್ತಿ ನಿಂತರೆ ಆಕಾಶಕ್ಕೆ ಮೂರೇ ಗೇಣು ಅನ್ನೋ ಅನುಭವ ಇಲ್ಲಿ ಬರುವ ಪ್ರಕೃತಿ ಪ್ರೇಮಿಗಳಿಗೆ ಆಗುತ್ತದೆ.

ಎತ್ತಿನಭುಜದ ಮೇಲೆ ಫೋಟೋ ಕ್ಲಿಕ್ಕಿಸಿ, ಸೆಲ್ಫಿ ತಗೊಂಡರೆ ಇಲ್ಲಿ ಭೇಟಿ ಕೊಟ್ಟು ಎಂಜಾಯ್ ಮಾಡಿದ ನೆನಪು ಸದಾ ಹಸಿರಾಗಿರುತ್ತದೆ. ಬಿಸಿಲಿದ್ದಾಗ ಬೆಟ್ಟದ ವಿಹಂಗಮ ನೋಟ, ಪ್ರಕೃತಿ ತುಂಬೆಲ್ಲಾ ಹರಡೋ ಮಂಜಿನ ಮಧ್ಯೆ ನಿಂತಾಗ ಪ್ರವಾಸಿಗರಿಗೆ ಆಕಾಶದಲ್ಲೇ ತೇಲಿದ ಅನುಭವ ಆಗುತ್ತದೆ. ಬಿಡುವಿದ್ದಾಗ ಈ ಅಪರೂಪದ ಪ್ರವಾಸಿಗರ ಹಾಟ್-ಫೇವರಿಟ್ ಆಗಿರೋ ಎತ್ತಿನಭುಜ ಬೆಟ್ಟಕ್ಕೆ ನೀವೂ ಭೇಟಿ ಕೊಟ್ಟು ಸೌಂದರ್ಯವನ್ನ ಕಣ್ತುಂಬಿಕೊಳ್ಳಿ.

Comments

Leave a Reply

Your email address will not be published. Required fields are marked *