ಕಾಶ್ಮೀರಕ್ಕೆ ಪ್ಲ್ಯಾನ್ ಮಾಡಿದ್ದ ಜನ ಕರ್ನಾಟಕದ ಕಾಶ್ಮೀರ ಕೊಡಗಿಗೆ ಲಗ್ಗೆ!

ಮಡಿಕೇರಿ: ಮಕ್ಕಳಿಗೆ ಈಗಾಗಲೇ ಬೇಸಿಗೆ ರಜೆ ಅರಂಭವಾಗಿದ್ದು,‌ ಸಾವಿರಾರು ಸಂಖ್ಯೆಯ ಜನರು ತಮ್ಮ ಮಕ್ಕಳನ್ನು ಕರೆದುಕೊಂಡು ದೂರದ ಕಾಶ್ಮೀರಕ್ಕೆ ಹೋಗಬಹುದು ಎಂದು ಪ್ಲ್ಯಾನ್ ಮಾಡಿದ್ರು.‌ ಅದರೆ, ಕಳೆದ ಕೆಲವು ದಿನಗಳ ಹಿಂದೆ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಅಟ್ಟಹಾಸದಿಂದ ದೇಶದ ಜನರು ಭಯ ಭೀತರಾಗಿದ್ದಾರೆ. ಇದರಿಂದ ತಮ್ಮ ಮಕ್ಕಳನ್ನು ಕರೆದುಕೊಂಡು ಸಾವಿರಾರು ಪ್ರವಾಸಿಗರು ಕರ್ನಾಟಕದ ಕಾಶ್ಮೀರದ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ.

ಕಾಶ್ಮೀರದಲ್ಲಿರುವ ನೀಲಂ ಕಣಿವೆಗಳ ಸಾಲುಗಳನ್ನು ವಿಕ್ಷಣೆ ಮಾಡಲು ಪ್ರತಿ ಬೇಸಿಗೆಯಲ್ಲಿ ಸುಮಾರು ಮೂರು ಲಕ್ಷ ಪ್ರವಾಸಿಗರು ತೆರಳುತ್ತಾರೆ. ಕಾಶ್ಮೀರದ ನೈಸರ್ಗಿಕ ಸೌಂದರ್ಯವನ್ನು ಸವಿಯುತ್ತಾರೆ. ಆದರೆ ಭಾರತ ಪಾಕ್ ಹಾಗೂ ಪಿಒಕೆ ಮೇಲೆ ದಾಳಿ ನಡೆಸುವ ಭೀತಿಯಿಂದಾಗಿ ಅಲ್ಲಿಂದ ಪ್ರವಾಸಿಗರು ದಿನ ನಿತ್ಯ ಜಾಗ ಖಾಲಿ ಮಾಡುತ್ತಿದ್ದಾರೆ. ಈ ನಡುವೆ ದೇಶ ವಿದೇಶದ ಜನರು ಕರ್ನಾಟಕದ ಕಾಶ್ಮೀರ ಕೊಡಗಿನತ್ತ ಹೆಜ್ಜೆ ಹಾಕುತ್ತಿದ್ದಾರೆ. ಇದರಿಂದ ಮಂಜಿನ ನಗರಿ ಮಡಿಕೇರಿಯ ವಿಶಾಲವಾದ ರಾಜಾಸೀಟ್ ಉದ್ಯಾನವನದ ತುಂಬೆಲ್ಲಾ ಜನ ತುಂಬಿ ತುಳುಕುತ್ತಿದ್ದಾರೆ.

ಸಾಗರೋಪಾದಿಯಲ್ಲಿ ಪ್ರವಾಸಿಗರು ಆಗಮಿಸಿದ್ದರಿಂದ ಮಡಿಕೇರಿಯ ರಸ್ತೆಗಳೆಲ್ಲಾ ವಾಹನ ದಟ್ಟಣೆಯಿಂದ ಗಿಜಿಗುಡುತ್ತಿವೆ. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಾಳಾದ ತಲಕಾವೇರಿ, ಭಾಗಮಂಡಲ, ದುಬಾರೆ, ಅಬ್ಬಿಫಾಲ್ಸ್ ಹೀಗೆ ಎಲ್ಲಾ ಪ್ರವಾಸಿತಾಣಗಳು ಸಂಪೂರ್ಣವಾಗಿ ತುಂಬಿಹೋಗಿವೆ.

ಪ್ರವಾಸಿಗರೊಬ್ಬರು ಮಾತಾನಾಡಿ ಕಾಶ್ಮೀರಕ್ಕೆ ಹೋಗುವ ಹಂಬಲ ಈ ಬಾರಿ ಇತ್ತು ಅದರೆ ಭಯೋತ್ಪಾದಕರ ಚಟುವಟಿಕೆಯಿಂದ ಸಾಕಷ್ಟು ಭಯದ ವಾತಾವರಣ ಇತ್ತು. ಇದರಿಂದ ನಮ್ಮ ಕರ್ನಾಟಕದ ಕಾಶ್ಮೀರ ನೋಡಲು ಅಗಮಿಸಿದ್ದೇವೆ. ಕೊಡಗಿನ ಪರ್ವತ ಶ್ರೇಣಿಗಳು ತುಂಬಾ ಸುಂದರವಾಗಿವೆ. ಈ ವರ್ಷ ಕಾಶ್ಮೀರಕ್ಕೆ ಹೋಗದೇ ಇದ್ದರೂ ಮುಂದಿನ ವರ್ಷ ನಾವುಗಳು ಕಾಶ್ಮೀರಕ್ಕೆ ಹೋಗುತ್ತೇವೆ ಎಂದಿದ್ದಾರೆ.