ತಾಲಿಬಾನ್‌ ಸರ್ಕಾರದಲ್ಲಿ ಸೂಸೈಡ್‌ ಬಾಂಬರ್‌ ಕುಟುಂಬಕ್ಕೆ ನಗದು ಪರಿಹಾರ, ನಿವೇಶನ ಗಿಫ್ಟ್‌

ಕಾಬೂಲ್‌: ಅಫ್ಘಾನಿಸ್ತಾನದ ಹೋಟೆಲಿನಲ್ಲಿ ದಾಳಿ ಎಸಗಿ ಪ್ರವಾಸಿಗರ ಹತ್ಯೆ ಮಾಡಿದ್ದ ಉಗ್ರರನ್ನು ತಾಲಿಬಾನ್‌ ಸರ್ಕಾರದ ಸಚಿವ ಪ್ರಶಂಸಿಸಿ ಕುಟುಂಬಕ್ಕೆ ನಗದು ಬಹುಮಾನ ಮತ್ತು ನಿವೇಶನವನ್ನು ನೀಡುವುದಾಗಿ ಹೇಳಿದ್ದಾನೆ.

ನೂತನವಾಗಿ ರಚನೆಯಾಗಿರುವ ತಾಲಿಬಾನ್‌ ಸರ್ಕಾರದ ಆಂತರಿಕ ಸಚಿವ ಸಿರಾಜುದ್ದೀನ್ ಹಕ್ಕಾನಿ ಕಾಬೂಲ್‌ ಹೋಟೆಲಿನಲ್ಲಿ ಮೃತ ಉಗ್ರರ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾನೆ. ಈ ವೇಳೆ ಪ್ರತಿಯೊಬ್ಬ ಸೂಸೈಡ್‌ ಬಾಂಬರ್‌ ಕುಟುಂಬಕ್ಕೆ 125 ಡಾಲರ್‌(ಅಂದಾಜು 9,300 ರೂ.) ಮತ್ತು ಜಾಗ ನೀಡುವುದಾಗಿ ಘೋಷಿಸಿದ್ದಾನೆ.

ತಾಲಿಬಾನ್ ಪರ ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಸ್ಥಳೀಯ ಮಾಧ್ಯಮಗಳು ಹಕ್ಕಾನಿ ಹೇಳಿಕೆಯನ್ನು ಆಧಾರಿಸಿ ವರದಿ ಮಾಡಿವೆ. ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಕೋಮುಗಲಭೆ – ಇಸ್ಕಾನ್ ದೇವಾಲಯದ ಟ್ವಿಟ್ಟರ್ ಖಾತೆ ಬ್ಲಾಕ್

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ಹುತಾತ್ಮರಾಗಿರುವವರನ್ನು ನಾವು ಸ್ಮರಿಸಿಕೊಳ್ಳಬೇಕು. ನಾವು ಹುತಾತ್ಮರ ಆಕಾಂಕ್ಷೆಗಳಿಗೆ ಯಾವುದೇ ದ್ರೋಹ ಮಾಡಬಾರದು. ಅವರು ದೇಶದ ಮತ್ತು ಇಸ್ಲಾಂನ ನಿಜವಾದ ಹೀರೋಗಳು ಎಂಬುದಾಗಿ ಉಗ್ರರನ್ನು ಸಿರಾಜುದ್ದೀನ್ ಬಣ್ಣಿಸಿದ್ದಾನೆ.

2018 ರ ಜನವರಿಯಲ್ಲಿ ಇಂಟರ್ ಕಾಂಟಿನೆಂಟಲ್ ಹೋಟೆಲ್‌ಗೆ ನುಗ್ಗಿದ್ದ 6 ಮಂದಿ ಉಗ್ರರು ಜನರನ್ನು ಒತ್ತೆಯಾಳಾಗಿ ಇರಿಸಿ ಮನ ಬಂದಂತೆ ಗುಂಡು ಹಾರಿಸಿ 40 ಜನರನ್ನು ಹತ್ಯೆ ಮಾಡಿದ್ದರು.

ಸಿರಾಜುದ್ದೀನ್ ತಂದೆ ಜಲಾಲುದ್ದೀನ್ ರಚಿಸಿದ, ಹಕ್ಕಾನಿ ಜಾಲವು ತಾಲಿಬಾನ್‌ನ ಅತ್ಯಂತ ಭಯಾನಕ ಉಗ್ರ ಸಂಘಟನೆಯಾಗಿದ್ದು, ಕಳೆದ ಎರಡು ದಶಕಗಳಲ್ಲಿ ಅಫ್ಘಾನಿಸ್ತಾನದಲ್ಲಿ ನಡೆದ ಕೆಲವು ಮಾರಣಾಂತಿಕ ದಾಳಿಗಳಿಗೆ ಕಾರಣವಾಗಿದೆ.

ಸಿರಾಜುದ್ದೀನ್ ಹಕ್ಕಾನಿ ಅಮೆರಿಕದ ಭಯೋತ್ಪಾದಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾನೆ. ಆತನ ಬಂಧನಕ್ಕಾಗಿ 10 ದಶಲಕ್ಷ ಡಾಲರ್(75.13 ಕೋಟಿ ರೂ.) ಬಹುಮಾನವನ್ನು ಅಮೆರಿಕ ಘೋಷಿಸಿತ್ತು.

Comments

Leave a Reply

Your email address will not be published. Required fields are marked *