ಜ್ಯೋತಿಷ್ಯದ ಪ್ರಕಾರ ಇಂದು ಬೆಸ್ಟ್ ಡೇ ಅಂತೆ-ಘಟಾನುಘಟಿ ನಾಯಕರಿಂದ ನಾಮಪತ್ರ ಸಲ್ಲಿಕೆ

ಬೆಂಗಳೂರು: ಎಲೆಕ್ಷನ್ ಕಣ ರಂಗೇರುತ್ತಿದ್ದು, ನಾಮಪತ್ರ ಸಲ್ಲಿಸಲು ಇವತ್ತು ಬಿಟ್ರೆ ಇರೋದು ಇನ್ನು ನಾಲ್ಕೇ ದಿನ. ಅದ್ರಲ್ಲಿ ಒಂದು ಭಾನುವಾರ, ಒಂದು ಮಂಗಳವಾರ ಬರಲಿದೆ. ಹೀಗಾಗಿ ಇವತ್ತೇ ಘಟಾನುಘಟಿ ನಾಯಕರು ತಮ್ಮ ಉಮೇದುವಾರಿಕೆ ಸಲ್ಲಿಸಲು ಮುಂದಾಗುತ್ತಿದ್ದಾರೆ.

ಚಾಮುಂಡೇಶ್ವರಿಯಲ್ಲಿ ಸಿಎಂ ಸಿದ್ದರಾಮಯ್ಯ, ಜಿಟಿ ದೇವೇಗೌಡ, ರಾಮನಗರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ವರುಣಾದಲ್ಲಿ ಯತೀಂದ್ರ, ಸಚಿವರಾದ ರಾಮಲಿಂಗಾರೆಡ್ಡಿ, ರೋಷನ್ ಬೇಗ್, ಆರ್ ವಿ ದೇಶಪಾಂಡೆ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಬಹುತೇಕರು ಇಂದೇ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

ದಿನದ ವಿಶೇಷತೆ: ಜ್ಯೋತಿಷ್ಯದ ಪ್ರಕಾರ ಶುಭ ಶುಕ್ರವಾರದ ಜೊತೆಗೆ ಚೌತಿ ಹಾಗೂ ಶಂಕರ ದಿನವಂತೆ. ಕಳೆದ ಎರಡು ಮೂರು ದಿನದಿಂದ ಅಮವಾಸ್ಯೆಯ ಆಸುಪಾಸು ಇದ್ದಿರೋದ್ರಿಂದ ಸಾಕಷ್ಟು ಜನ ನಾಮಪತ್ರ ಸಲ್ಲಿಕೆಗೆ ಉತ್ಸಾಹ ತೋರಿಲ್ಲ. ಆದ್ದರಿಂದ ಜ್ಯೋತಿಷಿಗಳ ಸಲಹೆಯ ಮೇರೆಗೆ ಇಂದೇ ರಾಜಕೀಯ ನಾಯಕರು ನಾಮಪತ್ರ ಸಲ್ಲಿಸಲಿದ್ದಾರೆ. ಅದ್ರಲ್ಲೂ ಬಹುತೇಕ 10 ಗಂಟೆಯಿಂದ 11 ಗಂಟೆಯೊಳಗೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಇನ್ನೊಂದು ವಿಶೇಷ ಅಂದ್ರೇ ಚೌತಿ ಹಾಗೂ ಶಂಕರ ದಿನ ಬಂದಿರೋದ್ರಿಂದ ಶಿವ ಹಾಗೂ ಗಣೇಶನ ಪೂಜೆಗೆ ಪ್ರಾಶಸ್ತ್ಯದಿನ. ಇಂದು ದೇಗುಲದಲ್ಲಿ ಪೂಜೆ ಸಲ್ಲಿಸಿಯೇ ನಾಮಪತ್ರ ಸಲ್ಲಿಕೆ ಮಾಡುವ ಸಾಧ್ಯತೆಗಳಿವೆ.

ಮೈಸೂರು ಪೊಲೀಸರಿಗೆ ಇವತ್ತೊಂದಿನ ಕಳೆದ್ರೆ ಸಾಕಪ್ಪ ಅನ್ನಿಸಿಬಿಟ್ಟಿದೆ. ಕಾರಣ ಇವತ್ತೇ ಸಿಎಂ ಮತ್ತು ಜಿಟಿಡಿ ನಾಮಪತ್ರ ಸಲ್ಲಿಸ್ತಿರೋದು. ಹೀಗಾಗಿ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಎಚ್ಚರಿಕೆ ವಹಿಸಬೇಕಿದೆ.

ನಾಮಿನೇಷನ್ ಹಾಕಲು ಮೊದಲು ಅನುಮತಿ ಪಡೆದಿದ್ದು ಜಿಟಿ ದೇವೇಗೌಡರು, ಆದ್ರೆ ಮೊದಲು ಕಾಂಗ್ರೆಸ್ ಪಕ್ಷದ ಮೆರವಣಿಗೆಗೆ ಪೊಲೀಸರು ಅವಕಾಶ ನೀಡಿದ್ದಾರೆ. ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ಕಾಂಗ್ರೆಸ್ ಮೆರವಣಿಗೆಗೆ ಪೊಲೀಸರ ಅವಕಾಶ ಕಲ್ಪಿಸಿದ್ದಾರೆ. ಜಿ.ಟಿ.ದೇವೆಗೌಡರಿಗೆ 2ರಿಂದ 3ಗಂಟೆಯವರೆಗೆ ಮೆರಣಿಗೆಗೆ ಸಮಯ ನಿಗದಿ ಮಾಡಲಾಗಿದೆ. ಆದರೆ ಸಿಎಂ ಪ್ರೋಗ್ರಾಂ ಬದಲಾದ ಕಾರಣ ಮೆರವಣಿಗೆ ತಡವಾಗಿ ಆರಂಭವಾಗುವ ಸಾಧ್ಯತೆಗಳಿದ್ದು, ಇದೇ ವೇಳೆಗೆ ಜೆಡಿಎಸ್ ಪಕ್ಷದ ಮೆರವಣಿಗೆ ಕೂಡ ಆರಂಭವಾಗಬೇಕಿದೆ. ಇಬ್ಬರ ಮೆರವಣಿಗೆ ಅರಮನೆ ಮುಂಭಾಗದ ಕೋಟೆ ಆಂಜನೇಯಸ್ವಾಮಿ ದೇವಾಲಯದಿಂದ ಆರಂಭವಾಗಲಿದ್ದು, ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಿಸೋದು ಹೇಗೆ ಎಂದು ಪೊಲೀಸರು ಚಿಂತೆಗೀಡಾಗಿದ್ದಾರೆ.

Comments

Leave a Reply

Your email address will not be published. Required fields are marked *