IND vs AUS 4th Test | ಬ್ಯಾಟರ್‌-ಬೌಲರ್‌ಗಳ ʻಬಾಕ್ಸಿಂಗ್‌ʼ – ಮೊದಲ ದಿನ ಆಸೀಸ್ 311/6

ಮೆಲ್ಬೊರ್ನ್: ಇಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಕ್ರಿಕೆಟ್‌ನ ಮೊದಲ ದಿನವೇ ಆಸೀಸ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದೆ. ಟೀಂ ಇಂಡಿಯಾ ಎದುರು ಪ್ರಾಬಲ್ಯ ಮೆರೆದ ಆಸ್ಟ್ರೇಲಿಯಾ (Australia) ಮೊದಲ ದಿನವೇ 86 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 311 ರನ್‌ ಗಳಿಸಿದೆ. ಸ್ಟೀವ್‌ ಸ್ಮಿತ್‌ (Steve Smith) ನಾಯಕ ಪ್ಯಾಟ್‌ ಕಮ್ಮಿನ್ಸ್‌ ಕ್ರೀಸ್‌ನಲ್ಲಿದ್ದು ಶುಕ್ರವಾರ 2ನೇ ದಿನದಾಟ ಮುಂದುವರಿಸಲಿದ್ದಾರೆ.

ಬಾರ್ಡರ್ ಗವಾಸ್ಕರ್ ಟ್ರೋಫಿಯ ಸರಣಿಯಲ್ಲಿ ಇದು 4ನೇ ಪಂದ್ಯವಾಗಿದೆ. ಮೊದಲನೇ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದ ಭಾರತ, 2ನೇ ಪಂದ್ಯದಲ್ಲಿ ಸೋಲು ಕಂಡಿತ್ತು, 3ನೇ ಪಂದ್ಯ ಡ್ರಾನಲ್ಲಿ ಅಂತ್ಯಕಂಡಿತು. ಸದ್ಯ ಮುಂದಿನ ಎರಡೂ ಪಂದ್ಯಗಳು ಭಾರತಕ್ಕೆ ನಿರ್ಣಾಯಕವಾಗಿದ್ದು, ಗೆದ್ದರಷ್ಟೇ ವಿಶ್ವಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ಗೆ (WTC Final) ಅರ್ಹತೆ ಪಡೆದುಕೊಳ್ಳಲಿದೆ.

ಮೆಲ್ಬೊರ್ನ್ (Melbourne) ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 4ನೇ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿತು. ಟೀಂ ಇಂಡಿಯಾ ಬೌಲರ್‌ಗಳ ಎದುರು ಅಬ್ಬರಿಸಿದ ಅಗ್ರ ನಾಲ್ವರು ಬ್ಯಾಟರ್‌ಗಳು ತಲಾ ಒಂದೊಂದು ಅರ್ಧಶತಕ ಸಿಡಿಸುವ ಮೂಲಕ ಮೊದಲ ದಿನವೇ ತಂಡದ ಮೊತ್ತ 300 ರನ್‌ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

ಆಸೀಸ್‌ ಪರ ಅಖಾಡಕ್ಕಿಳಿದ 19 ವರ್ಷದ ಸ್ಯಾಮ್ ಕಾನ್​​ಸ್ಟಸ್ 60‌ ರನ್‌ (65 ಎಸೆತ, 6 ಬೌಂಡರಿ, 2 ಸಿಕ್ಸರ್), ಉಸ್ಮಾನ್‌ ಖವಾಜ 57 ರನ್‌ (121 ಎಸೆತ, 6 ಬೌಂಡರಿ), ಮಾರ್ನಸ್‌ ಲಾಬುಶೇನ್‌ 72 ರನ್‌ (145 ಎಸೆತ, 7 ಬೌಂಡರಿ), ಮಿಚೆಲ್‌ ಮಾರ್ಷ್‌ 4 ರನ್‌ ಅಲೆಕ್ಸ್‌ ಕ್ಯಾರಿ 31 ರನ್‌ ಗಳಿಸಿದ್ದರೆ, ಟೀಂ ಇಂಡಿಯಾ ಕಾಡುತ್ತಿದ್ದ ಟ್ರಾವಿಸ್‌ ಹೆಡ್‌ ಶೂನ್ಯ ಸುತ್ತಿದರು. ಇನ್ನೂ ಸ್ಟೀವ್‌ ಸ್ಮಿತ್‌ 68 ರನ್‌ (111 ಎಸೆತ, 5 ಬೌಂಡರಿ, 1 ಸಿಕ್ಸರ್)‌ ಹಾಗೂ ಪ್ಯಾಟ್‌ ಕಮ್ಮಿನ್ಸ್‌ 8 ರನ್‌ ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದಿರಿಸಿದ್ದಾರೆ.

ಟೀಂ ಇಂಡಿಯಾ ಪರ ಮಾರಕ ದಾಳಿ ನಡೆಸಿದ ಜಸ್ಪ್ರೀತ್‌ ಬುಮ್ರಾ ಪ್ರಮುಖ 3 ವಿಕೆಟ್‌ ಕಿತ್ತರೆ, ಆಕಾಶ್‌ ದೀಪ್‌, ರವೀಂದ್ರ ಜಡೇಜಾ, ವಾಷಿಂಗ್ಟನ್‌ ಸುಂದರ್‌ ತಲಾ ಒಂದೊಂದು ವಿಕೆಟ್‌ ಪಡೆದರು.