ಲೆಬನಾನ್‌ ಮೇಲೆ ಇಸ್ರೇಲ್‌ ಏರ್‌ಸ್ಟ್ರೈಕ್‌- ಹಿಜ್ಬುಲ್ಲಾ ಟಾಪ್‌ ಕಮಾಂಡರ್‌ ಹತ್ಯೆ

ಟೆಲ್‌ ಅವೀವ್‌: ಲೆಬನಾನ್‌ನ (Lebanon) ರಾಜಧಾನಿ ಬೈರುತ್‌ನಲ್ಲಿರುವ (Beirut) ಕಟ್ಟಡದ ಮೇಲೆ ಶುಕ್ರವಾರ ಇಸ್ರೇಲ್‌ ಏರ್‌ಸ್ಟ್ರೈಕ್‌ (Air Strike) ಮಾಡಿ ಹಿಜ್ಬುಲ್ಲಾದ (Hezbollah) ಟಾಪ್‌ ಮಿಲಿಟರಿ ನಾಯಕನನ್ನು ಹತ್ಯೆ ಮಾಡಿದೆ. ಈ ದಾಳಿಯಲ್ಲಿ 8 ಮಂದಿ ಸಾವನ್ನಪ್ಪಿ 60ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಹಿಜ್ಬುಲ್ಲಾ ಉಗ್ರ ಸಂಘಟನೆಯ ಆಪರೇಷನ್‌ ಯೂನಿಟ್‌ ನೋಡಿಕೊಳ್ಳುತ್ತಿದ್ದ ಇಬ್ರಾಹಿಂ ಅಖಿಲ್‌ನನ್ನು (Ibrahim Aqil) ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್‌ (Israel) ಅಧಿಕೃತವಾಗಿ ತಿಳಿಸಿದೆ.

ಕಳೆದ ಅಕ್ಟೋಬರ್‌ 7 ರಂದು ಇಸ್ರೇಲ್‌ ಒಳಗೆ ನುಗ್ಗಿ ಅಪಹರಣ ಮಾಡಿ ಅಮಾಯಕ ಜನರನ್ನು ಹತ್ಯೆ ಮಾಡಲಾಗಿತ್ತೋ ಅದೇ ರೀತಿ ದಾಳಿಯನ್ನು ಇಬ್ರಾಹಿಂ ಅಖಿಲ್‌ ಯೋಜಿಸುತ್ತಿದ್ದ. ಹಿಜ್ಬುಲ್ಲಾದ ಮೇಲೆ ನಮ್ಮ ದಾಳಿ ಮುಂದುವರಿಯಲಿದೆ. ಇಸ್ರೇಲ್‌ ಜನರನ್ನು ರಕ್ಷಿಸಲು ನಾವು ಬದ್ಧವಾಗಿದ್ದೇವೆ ಎಂದು ಇಸ್ರೇಲ್‌ ತಿಳಿಸಿದೆ.

1983ರಲ್ಲಿ ಬೈರುತ್‌ನಲ್ಲಿನ ಅಮೆರಿಕ ರಾಯಭಾರ ಕಚೇರಿಯ ಮೇಲೆ ಬಾಂಬ್‌ ದಾಳಿ ಮಾಡಿ 63 ಜನರನ್ನು ಹತ್ಯೆ ಮಾಡಲಾಗಿತ್ತು. ಈ ಕೃತ್ಯ ಮಾಡಿದ ಸಂಘಟನೆಯ ಪ್ರಧಾನ ಸದಸ್ಯನಾಗಿದ್ದ ಈತನ ಬಗ್ಗೆ ಮಾಹಿತಿ ನೀಡಿದವರಿಗೆ ಅಮೆರಿಕ 7 ದಶಲಕ್ಷ ಡಾಲರ್‌ ಬಹುಮಾನ ನೀಡುವುದಾಗಿ ಪ್ರಕಟಿಸಿತ್ತು. ಇದನ್ನೂ ಓದಿ: ಹಿಜ್ಬುಲ್ಲಾದ 100 ರಾಕೆಟ್ ಲಾಂಚರ್‌ ಉಡೀಸ್‌ – ಪ್ರತೀಕಾರದ ದಾಳಿಗೂ ಮುನ್ನವೇ ಪೆಟ್ಟುಕೊಟ್ಟ ಇಸ್ರೇಲ್‌

ಇಸ್ರೇಲ್‌ಗೆ ಗೊತ್ತಾಗಿದ್ದು ಹೇಗೆ?
ಬುಧವಾರ ನಡೆದ ಪೇಜರ್‌ ಸ್ಫೋಟದಿಂದ ಇಬ್ರಾಹಿಂ ಅಖಿಲ್‌ ಗಾಯಗೊಂಡಿದ್ದ. ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿದ್ದ ಅಖಿಲ್‌ ಡಿಸ್ಚಾರ್ಜ್‌ ಆಗಿದ್ದ. ಈತನ ಚಲನವಲನದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಇಸ್ರೇಲ್‌ ಅಖಿಲ್‌ ನೆಲೆಸಿದ್ದ ಕಟ್ಟಡದ ಮೇಲೆ ಏರ್‌ಸ್ಟ್ರೈಕ್‌ ಮಾಡಿ ಹತ್ಯೆ ಮಾಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.