ಹಾಸನಾಂಬ ದೇವಿ ದರ್ಶನಕ್ಕೆ ಕ್ಷಣಗಣನೆ- ನಾಳೆಯಿಂದ ದರ್ಶನ ಆರಂಭ

ಹಾಸನ: ಸುಪ್ರಸಿದ್ಧ ಹಾಸನಾಂಬ ದೇವಿ ದರ್ಶನಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು, ನಾಳೆಯಿಂದಲೇ ದೇವಿ ಭಕ್ತರಿಗೆ ದರ್ಶನ ನೀಡಲಿದ್ದಾಳೆ.

ಅಕ್ಟೋಬರ್ 17 ರಿಂದ 29 ರವರೆಗೆ ಹಾಸನಾಂಬ ದೇವಾಲಯ ಬಾಗಿಲು ತೆರೆಯಲಿದ್ದು, ಈ ಬಾರಿ ಹದಿಮೂರು ದಿನಗಳ ಕಾಲ ಹಾಸನಾಂಬೆ ದರ್ಶನ ನೀಡಲಿದ್ದಾಳೆ. ಮೊದಲ ಹಾಗೂ ಕೊನೆಯ ದಿನ ಭಕ್ತರಿಗೆ ದೇವಿಯ ದರ್ಶನ ಇರುವುದಿಲ್ಲ. ಉಳಿದಂತೆ ಎಲ್ಲ ದಿನಗಳು ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಅಶ್ವೀಜ ಮಾಸದ ಮೊದಲ ಗುರುವಾರ ಮಧ್ಯಾಹ್ನ 12.30ಕ್ಕೆ ದೇವಿಯ ಗರ್ಭಗುಡಿ ಬಾಗಿಲು ತೆರೆಯಲಿದ್ದು, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ದೇವಿಯ ದರ್ಶನಕ್ಕಾಗಿ ಭಕ್ತಸಾಗರ ಹರಿದು ಬರಲಿದೆ. ವರ್ಷಕ್ಕೊಮ್ಮೆ ಮಾತ್ರ ಹಾಸನಾಂಬೆ ದೇವಿ ದರ್ಶನ ಭಾಗ್ಯ ಕರುಣಿಸುತ್ತಾಳೆ. ಹೀಗಾಗಿ ಪ್ರತಿ ವರ್ಷ ಸಾವಿರಾರು ಭಕ್ತರು ದೇವಿಯ ದರ್ಶನವನ್ನು ಪಡೆಯಲು ಆಗಮಿಸುತ್ತಾರೆ.

ಪ್ರತಿದಿನ ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 1.30 ಹಾಗೂ ಮಧ್ಯಾಹ್ನ 3.30 ರಿಂದ ದಿನ ಮುಕ್ತಾಯದವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ವಿಶೇಷ ದರ್ಶನಕ್ಕಾಗಿ 300 ಹಾಗೂ 1000 ರೂ. ಗಳ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ.

ಜಿಲ್ಲಾಡಳಿತ ಭಕ್ತರಿಗೆ ಅಗತ್ಯವಿರುವ ಎಲ್ಲ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸಿದೆ. ದೇವಾಲಯದ ಒಳಗೆ ಹಾಗೂ ಸುತ್ತಮುತ್ತ ಸಿಸಿ ಟಿವಿ ಕಣ್ಗಾವಲು ಇರಿಸಲಾಗಿದೆ. ದೇವಿಯ ಸುಗಮ ದರ್ಶನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

Comments

Leave a Reply

Your email address will not be published. Required fields are marked *