100 ಮಹಿಳೆಯರು, 50 ಪುರುಷರ ಜೊತೆ 2 ಗಂಟೆ ನಾಟಿ ಮಾಡಲಿದ್ದಾರೆ ಸಿಎಂ ಎಚ್‍ಡಿಕೆ!

ಮಂಡ್ಯ: ರೈತರಿಗೆ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ತಾವೇ ಸ್ವತಃ ರೈತರಾಗಿ ಗದ್ದೆಗಿಳಿಯುವ ಮೂಲಕ ಶನಿವಾರ ರೈತರ ಜೊತೆ ನಾಟಿ ಮಾಡಲಿದ್ದಾರೆ.

ಜಿಲ್ಲೆಯ ಪಾಂಡವಪುರ ತಾಲೂಕಿನ ಸೀತಾಪುರ ಮತ್ತು ಅರಳಕುಪ್ಪೆ ಗ್ರಾಮದ ವ್ಯಾಪ್ತಿಗೆ ಸೇರಿದ ಗದ್ದೆ ಬಯಲಿಗೆ ನಾಳೆ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಗದ್ದೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಬೆಳಗ್ಗೆ ನಾಟಿ ಕೆಲಸ ಮಾಡಲಿದ್ದಾರೆ. ಸಿಡಿಎಸ್ ನಾಲೆ ಪಕ್ಕದಲ್ಲೇ ಇರುವ ವಿಶಾಲವಾದ ಗದ್ದೆ ಬಯಲಿನಲ್ಲಿ ಸುಮಾರು 5 ಎಕರೆಯಷ್ಟು ಜಾಗವನ್ನು ಮುಖ್ಯಮಂತ್ರಿಗಳ ನಾಟಿ ಕೆಲಸಕ್ಕೆಂದು ತಯಾರಿ ಮಾಡಲಾಗಿದೆ.

ರೈತರಾದ ಮಹದೇವಮ್ಮ, ದೇವರಾಜು, ಮಹೇಶ, ಹೇಮಲತ, ಮಾಯಮ್ಮ ಅವರಿಗೆ ಸೇರಿದ ಭತ್ತದ ಗದ್ದೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ನಾಟಿ ಮಾಡಲಿದ್ದಾರೆ. ಮುಖ್ಯಮಂತ್ರಿಗಳ ಜೊತೆ ರೈತರೂ ಕೂಡ ನಾಟಿ ಕೆಲಸಕ್ಕೆ ಸಾಥ್ ನೀಡಲಿದ್ದಾರೆ. ಸಿಎಂ ಕುಮಾರಸ್ವಾಮಿ ಅವರಿಗೆ 100 ಮಹಿಳೆಯರು ಮತ್ತು 50 ರೈತ ಪುರುಷರು ಸಾಥ್ ಕೊಡಲಿದ್ದಾರೆ. ಜೊತೆಗೆ 25 ಜೋಡಿ ಎತ್ತುಗಳು ಮೂಲಕ ನಾಟಿ ಕೆಲಸ ಮಾಡಲಾಗುತ್ತದೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.

ಸತತ ಬರಗಾಲದಿಂದ ನೊಂದಿದ್ದ ಮಂಡ್ಯ ರೈತರು ಈ ಬಾರಿ ಕೆಆರ್ ಎಸ್ ಅಣೆಕಟ್ಟು ತುಂಬಿದ್ದರಿಂದ ಬೆಳೆ ಬೆಳೆಯುವ ಉತ್ಸಾಹದಲ್ಲಿದ್ದಾರೆ. ಈ ಸಮಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಜೊತೆ ಗದ್ದೆಗಿಳಿಯುವುದಲ್ಲದೆ ತಮ್ಮನ್ನು ಟೀಕಿಸುವ ಬಿಜೆಪಿ ಮುಖಂಡರಿಗೆ ತಮ್ಮ ರೈತಪರ ಕಾಳಜಿ ಮೂಲಕ ಉತ್ತರ ಕೊಡಲಿದ್ದಾರೆ ಎಂದು ಎಚ್‍ಡಿಕೆ ಅಭಿಮಾನಿಗಳು ಹೇಳುತ್ತಿದ್ದಾರೆ.

ಮುಖ್ಯಮಂತ್ರಿಗಳು ತಮ್ಮ ಗದ್ದೆಗೆ ಇಳಿದು ನಾಟಿ ಮಾಡುವ ಬಗ್ಗೆ ಗದ್ದೆಯ ಮಾಲೀಕರಾದ ರೈತರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಸಿಎಂ ಕುಮಾರಸ್ವಾಮಿ ಅವರು ದಿವಂಗತ ಡಾ. ರಾಜ್ ಕುಮಾರ್ ಅವರಿಂದ ಸ್ಫೂರ್ತಿ ಪಡೆದು ಈ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Comments

Leave a Reply

Your email address will not be published. Required fields are marked *