ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧ 4ನೇ ಟಿ20 ಪಂದ್ಯದಲ್ಲಿ ಭರ್ಜರಿ ರನ್‌ಗಳ ಗೆಲವು ಸಾಧಿಸಿರುವ ಟೀಂ ಇಂಡಿಯಾ T20 ಸರಣಿಯಲ್ಲಿ ಸಮಬಲ ಸಾಧಿಸಿದೆ.
ನಿನ್ನೆ ರಾಜ್‌ಕೋಟ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ನಿಗದಿತ ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 169 ರನ್ ಬಾರಿಸಿತ್ತು. ಈ ರನ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 87 ರನ್ ಗಳಿಸಿ ಹೀನಾಯ ಸೋಲು ಕಂಡಿತು. ಇದೀಗ ಎರಡೂ ತಂಡಕ್ಕೂ ಪ್ರತಿಷ್ಟೆಯಾಗಿರುವ 5ನೇ ಟಿ20 ಪಂದ್ಯದಲ್ಲಿ ಯಾರು ಗೆದ್ದು ಬೀಗುತ್ತಾರೆ ಎಂಬುದೇ ಕುತೂಹಲ ಮೂಡಿಸಿದೆ.

ಟಿ20 ಸರಣಿಯ 5ನೇ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ದೇಶ-ವಿದೇಶದ ಕ್ರಿಕೆಟ್ ಪ್ರೇಮಿಗಳ ಕಣ್ಣು ಬೆಂಗಳೂರಿನತ್ತ ಹಾಯುತ್ತಿದೆ. ಟಿ20 ಮೊದಲ ಎರಡು ಪಂದ್ಯಗಳಲ್ಲಿ ಕ್ರಮವಾಗಿ 211, 149 ರನ್‌ಗಳಿಸಿದ್ದ ಟೀಂ ಇಂಡಿಯಾ ಎರಡರಲ್ಲೂ ಭಾರೀ ಅಂತರದಲ್ಲಿ ಸೋಲು ಕಂಡಿತು. ಮುಂದಿನ 3 ಮತ್ತು 4ನೇ ಪಂದ್ಯದಲ್ಲಿ ಎದುರಾಳಿ ತಂಡವನ್ನು ಅತೀ ಕಡಿಮೆ ರನ್‌ಗಳಲ್ಲೇ ಆಲೌಟ್ ಮಾಡಿ ಮಣ್ಣು ಮುಕ್ಕಿಸುವ ಮೂಲಕ ಸೇಡು ತೀರಿಸಿಕೊಂಡಿತು. ಇದನ್ನೂ ಓದಿ: ಏಕದಿನ ಕ್ರಿಕೆಟ್‍ನಲ್ಲಿ ದಾಖಲೆಯ 498 ರನ್ ಸಿಡಿಸಿದ ಇಂಗ್ಲೆಂಡ್ – ಮೈದಾನದೆಲ್ಲೆಡೆ ಸಿಕ್ಸರ್, ಬೌಂಡರಿಗಳ ಅಬ್ಬರ

ಬೆಂಗಳೂರಿನಲ್ಲಿ ನಡೆಯುತ್ತಿರುವ 5ನೇ ಟಿ20 ಪಂದ್ಯ ಅತ್ಯಂತ ರೋಚಕತೆಯಿಂದ ಕೂಡಿದೆ. ಬೆಂಗಳೂರು ನಗರದ ವಿವಿಧೆಡೆಯಲ್ಲಿ ಹೆಚ್ಚಿನ ಜನರು ಸೇರಲಿದ್ದಾರೆ. ಅದಕ್ಕಾಗಿಯೇ ಮೆಟ್ರೋ ಸಮಯವನ್ನೂ ವಿಸ್ತರಿಸಲಾಗಿದೆ. ಇದನ್ನೂ ಓದಿ: ಡಿಕೆ ಅಬ್ಬರ, ಅವೇಶ್ ಖಾನ್ ಶೈನ್ – ಗೆಲುವಿನೊಂದಿಗೆ ಸರಣಿ ಜೀವಂತವಾಗಿರಿಸಿಕೊಂಡ ಭಾರತ
ನಿನ್ನೆ ನಡೆದ ಪಂದ್ಯದಲ್ಲಿ ಅವೇಶ್ ಖಾನ್ ಆಕ್ರಮಣಕಾರಿ ಬೌಲಿಂಗ್ ದಾಳಿಗೆ ದಕ್ಷಿಣ ಆಫ್ರಿಕಾದ ಬ್ಯಾಟರ್‌ಗಳು ಪೆವಿಲಿಯನ್ ಸೇರಿದರು. ಅವೇಶ್ ಖಾನ್ 18 ರನ್ ನೀಡಿ 4 ವಿಕೆಟ್ ಪಡೆದುಕೊಂಡರು.

ದಕ್ಷಿಣ ಆಫ್ರಿಕಾ ಪರ ಬ್ಯಾಟ್ ಮಾಡಿದ ಕ್ವಿಂಟನ್ ಡಿಕಾಕ್ 14, ಡುಸ್ಸೆನ್ 20, ಜೇಸನ್ 12 ರನ್ ಬಾರಿಸಿದ್ದಾರೆ. ಟೀಂ ಇಂಡಿಯಾ ಅವೇಶ್ ಖಾನ್ 4, ಯಜುವೇಂದ್ರ ಚಹಾಲ್ 2, ಹರ್ಷಲ್ ಪಟೇಲ್ ಮತ್ತು ಅಕ್ಷರ್ ಪಟೇಲ್ ತಲಾ 1 ವಿಕೆಟ್ ಪಡೆಯುವ ಮೂಲಕ ಎದುರಾಳಿ ತಂಡವನ್ನು ಮಂಡಿಯೂರಿಸುವಲ್ಲಿ ಯಶಸ್ವಿಯಾದರು.
ಬ್ಯಾಟಿಂಗ್ ವಿಭಾಗದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ರಿತುರಾಜ್ ಗಾಯಕ್ವಾಡ್ 5 ರನ್ ಗಳಿಸಿ ಔಟಾದರೆ, ಇಶಾನ್ ಕಿಶನ್ 27 ರನ್ ಗಳಿಸಿದ್ದಾರೆ. ರಿಷಬ್ ಪಂತ್ 17 ರನ್‌ಗಳಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದಿದ್ದ ಹಾರ್ದಿಕ್ ಪಾಂಡ್ಯ 46, ದಿನೇಶ್ ಕಾರ್ತಿಕ್ 55 ರನ್ ಬಾರಿಸಿ ತಂಡದ ಮೊತ್ತವನ್ನು 160 ರನ್‌ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

Leave a Reply