ದುಬಾರಿ ಡೀಲ್‌ – ಕ್ರೀಡಾ ವೀಕ್ಷಕ ವಿವರಣೆಗಾರನಿಗೆ ಸಾವಿರ ಕೋಟಿ ಸಂಬಳ

ನ್ಯೂಯಾರ್ಕ್‌: ಅಮೆರಿಕದ ನ್ಯಾಷನಲ್‌ ಫುಟ್‌ಬಾಲ್‌ ಲೀಗ್‌ ವೀಕ್ಷಕ ವಿವರಣೆಗಾರರಿಗೆ ವಾಹಿನಿಯೊಂದು ಮಿಲಿಯನ್‌ ಡಾಲರ್‌ ಆಫರ್‌ ನೀಡಿ ಸುದ್ದಿಯಾಗಿದೆ.

7 ಬಾರಿ ಸೂಪರ್‌ ಬೌಲ್‌ ಚಾಂಪಿಯನ್‌ ಆಟಗಾರ ಟಾಮ್‌ ಬ್ರಾಡಿ ಅವರಿಗೆ ಫಾಕ್ಸ್‌ ಸ್ಫೋರ್ಟ್ಸ್‌ 10 ವರ್ಷದ ಅವಧಿಗೆ 375 ದಶಲಕ್ಷ ಡಾಲರ್‌(ಅಂದಾಜು 2,900 ಕೋಟಿ ರೂ.) ಪ್ಯಾಕೇಜ್‌ ನೀಡಿದೆ.

44 ವರ್ಷದ ಟಾಮ್‌ ಬ್ರಾಡಿ 19 ವರ್ಷಗಳ ಕಾಲ ನ್ಯೂ ಇಂಗ್ಲೆಂಡ್‌ ಪ್ಯಾಟ್ರಿಯಟ್ಸ್‌ ತಂಡದ ಪರ ಆಡಿದ್ದರು. 2019ರಿಂದ ಟ್ಯಾಂಪಾ ಬೇ ಬುಕಾನಿಯರ್ಸ್ ಪರ ಆಡಿದ್ದರು. ಈಗ ತಮ್ಮ ಕ್ರೀಡಾ ಜೀವನಕ್ಕೆ ಗುಡ್‌ಬೈ ಹೇಳಿ ವೀಕ್ಷಕ ವಿವರಣೆಗಾರರಾಗಲು ಹೊರಟಿದ್ದಾರೆ.

ಅಮೆರಿಕದ ಕ್ರೀಡಾ ಇತಿಹಾಸದಲ್ಲಿ ಈ ಪ್ಯಾಕೇಜ್‌ ಮೊತ್ತ ಬಹಳ ದುಬಾರಿ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಹಿಂದೆ ಸಿಬಿಎಸ್‌ ಸ್ಫೋರ್ಟ್ಸ್‌ ವಾಹಿನಿ ರೊಮೊ ಅವರ ಜೊತೆ 18 ದಶಲಕ್ಷ ಡಾಲರ್‌ ಒಪ್ಪಂದ ಮಾಡಿಕೊಂಡಿತ್ತು.

ವೀಕ್ಷಕ ವಿವರಣೆಗಾರದಿಂದಾಗಿ ಪಂದ್ಯದ ವೀಕ್ಷಣೆ ಹೆಚ್ಚಾಗುವುದರಿಂದ ಕ್ರೀಡಾ ವಾಹಿನಿಗಳು ದುಬಾರಿ ಮೊತ್ತದ ಪ್ಯಾಕೇಜ್‌ ನೀಡುತ್ತಿವೆ.

20 ವರ್ಷಗಳ ಕಾಲ ಆಡಿರುವುದರಿಂದ ಬ್ರಾಡ್‌ ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಅನುಭವದ ಜೊತೆ ವಿವರಣೆ ಹೇಳುವುದರಿಂದ ವೀಕ್ಷಕರಿಗೆ ಪಂದ್ಯ ಇಷ್ಟವಾಗಲಿದೆ ಎಂದು ಫಾಕ್ಸ್‌ ಸ್ಫೋರ್ಟ್ಸ್‌ ಈ ಡೀಲ್‌ ಬಗ್ಗೆ ಪ್ರತಿಕ್ರಿಯಿಸಿದೆ.

ಟ್ವಿಟ್ಟರ್‌ನಲ್ಲಿ ಬ್ರಾಡಿ ಅವರನ್ನು 27 ಲಕ್ಷ ಮಂದಿ ಫಾಲೋ ಮಾಡುತ್ತಿದ್ದರೆ ಫೇಸ್‌ಬುಕ್‌ನಲ್ಲಿ 50 ಲಕ್ಷಕ್ಕೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 1.2 ಕೋಟಿ ಮಂದಿ ಫಾಲೋ ಮಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *