ಲಾಕ್‍ಡೌನ್ ವಿಸ್ತರಣೆ- ಪ್ರಧಾನಿ ಮೋದಿಯನ್ನು ವ್ಯಂಗ್ಯವಾಡಿದ ನಟಿ

ಹೈದರಾಬಾದ್: ಸದಾ ಒಂದಿಲ್ಲೊಂದು ವಿವಾದದ ಮೂಲಕ ಸುದ್ದಿಯಾಗುವ ಟಾಲಿವುಡ್ ನಟಿ ಶ್ರೀ ರೆಡ್ಡಿ ಇದೀಗ ಪ್ರಧಾನಿ ಮೋದಿಯವರ ನಿರ್ಧಾರದ ಕುರಿತು ಪ್ರಶ್ನಿಸುವ ಮೂಲಕ ವಿವಾದಕಕ್ಕೆ ಕಾರಣವಾಗಿದ್ದಾರೆ. ಲಾಕ್‍ಡೌನ್ ವಿಸ್ತರಣೆ ಕುರಿತು ಮೋದಿಯವರಿಗೆ ಮೇಲಿಂದ ಮೇಲೆ ಪ್ರಶ್ನೆಗಳನ್ನು ಕೇಳಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕೊರೊನಾ ಮಹಾಮಾರಿಯಿಂದಾಗಿ ದೇಶವೇ ಅಲ್ಲೋಲ ಕಲ್ಲೋಲವಾಗಿದ್ದು, 15 ದಿನಗಳ ಬಳಿಕ ಮತ್ತೆ ಮೇ 3ರ ವರೆಗೆ ಪ್ರಧಾನಿ ಮೋದಿ ಲಾಕ್‍ಡೌನ್ ವಿಸ್ತರಿಸಿದ್ದಾರೆ. ಈ ನಿರ್ಧಾರವನ್ನು ಬಹುತೇಕರು ಸ್ವಾಗತಿಸಿದ್ದಾರೆ. ಯಾಕೆಂದರೆ ಸದ್ಯದ ಪರಿಸ್ಥಿತಿಯಲ್ಲಿ ಲಾಕ್‍ಡೌನ್ ಮಾಡುವ ನಿರ್ಧಾರ ಹೊರತುಪಡಿಸಿದರೆ, ಇನ್ನಾವುದೇ ದಾರಿ ಇಲ್ಲ. ಆದರೆ ಈ ನಟಿ ಮಾತ್ರ ಪ್ರಧಾನಿ ಮೋದಿಯವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಗಳನ್ನು ಕೇಳುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ.

ಈ ಕುರಿತು ಫೇಸ್ಬುಕ್‍ನಲ್ಲಿ ಸರಣಿ ಪೋಸ್ಟ್ ಮಾಡಿರುವ ನಟಿ ಶ್ರೀರೆಡ್ಡಿ, ಪ್ರಧಾನಿ ಮೋದಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿದ್ದು, ಎರಡೆರಡು ಅರ್ಥವನ್ನು ಕಲ್ಪಿಸಿದ್ದಾರೆ. ಮೇ 3ರ ವರೆಗೆ ಲಾಕ್‍ಡೌನ್ ಮುಂದುವರಿಯಲಿದೆ ಎಂದು ಮೋದಿಯವರು ತಿಳಿಸಿದ್ದಾರೆ. ಈ ಮೂಲಕ ಆರೋಗ್ಯವಾಗಿರಿ ಎಂದು ನೇರವಾಗಿ ಹೇಳಿದ್ದಾರೆ. ಅಲ್ಲದೆ ಅರ್ಥ ವ್ಯವಸ್ಥೆ ಕುಸಿದಿರುವ ಬಗ್ಗೆ ಹಾಗೂ ಬಡವರಿಗೆ ಸಹಾಯ ಮಾಡುವುದಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಮತ್ತೊಂದು ಪೋಸ್ಟ್ ನಲ್ಲಿ ಈ ನಿರ್ಧಾರದ ಕುರಿತು ವ್ಯಂಗ್ಯವಾಗಿ ಮಾತನಾಡಿದ್ದು, ಮೇ 3ರ ನಂತರ ಕೊರೊನಾ ಆಕಾಶಕ್ಕೆ ಶಿಫ್ಟ್ ಆಗಲಿದೆಯೇ, ಬಡ ಜನತೆ ಬಗ್ಗೆ ಚಿಂತಿಸಿ, ಅವರನ್ನು ಉಳಿಸಿ. ಅಗತ್ಯ ವಸ್ತುಗಳನ್ನು ಕೊಳ್ಳಲಿಕ್ಕಾದರೂ ಅವರಿಗೆ ಹಣ ನೀಡಿ ಎಂದು ಬರೆದುಕೊಂಡಿದ್ದಾರೆ.

ಅಲ್ಲದೆ ಮೇ 3ರ ನಂತರವೂ ಕೊರೊನಾ ಸೋಂಕಿತ ವ್ಯಕ್ತಿ ಹೊರಗಿದ್ದರೆ, ಆತ ಸಹ ಲಕ್ಷಾಂತರ ಜನರಿಗೆ ವೈರಸ್ ಹರಡಿಸುತ್ತಾನೆ. ಆಗ ಏನು ಮಾಡುವುದು ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಮೋದಿಯವರ ಲಾಕ್‍ಡೌನ್ ವಿಸ್ತರಣೆ ಘೋಷಣೆಯನ್ನು ಪ್ರಶ್ನಿಸಿದ್ದಾರೆ. ಪೇಸ್ಬುಕ್‍ನಲ್ಲಿ ಪೋಸ್ಟ್ ಮಾಡುತ್ತಿದ್ದಂತೆ ಶ್ರೀ ರೆಡ್ಡಿಯವರನ್ನು ಹಲವರು ತರಾಟೆಗೆ ತೆಗೆದುಕೊಂಡಿದ್ದು, ಜೀವ ಮುಖ್ಯ ನಂತರ ಅರ್ಥಿಕತೆ, ಪ್ರಧಾನಿ ಮೋದಿ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.

ಅಲ್ಲದೆ ಮತ್ತೊಬ್ಬರು ಕಮೆಂಟ್ ಮಾಡಿ ಅವರು ಸಾರ್ವಜನಿಕ ಜೀವನದಲ್ಲಿದ್ದಾರೆ, ಗೌರವವನ್ನಾದರೂ ಕೊಟ್ಟು ಮಾತನಾಡಿ ಎಂದಿದ್ದಾರೆ. ಹೊರಗಡೆ ಹೋಗಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ. ಇದು ಆರ್ಥಿಕತೆಯ ಪ್ರಶ್ನೆಯಲ್ಲ, ಜೀವ ಉಳಿಸುವುದಾಗಿದೆ. ಅಲ್ಲದೆ ಈ ವರೆಗೆ ಆಹಾರದ ಕೊರತೆಯಿಂದ ಸಾವನ್ನಪ್ಪಿದ ಉದಾಹರಣೆಗಳಿಲ್ಲ. ಕೇವಲ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *