ಪಾಕ್ ವಶದಲ್ಲಿರುವ ಅಭಿನಂದನ್ ಇಂದು ಬಿಡುಗಡೆ – ಸ್ವಾಗತಕ್ಕೆ ಕಾದಿದೆ ವಾಘಾ ಗಡಿ ಬಾಗಿಲು

– ಕೋಟಿ ಭಾರತೀಯರಲ್ಲಿ ಸಂಭ್ರಮ

ನವದೆಹಲಿ: ಧೀರಯೋಧ ಅಭಿನಂದನ್ ವರ್ತಮಾನ್ ಇಂದು ಮಧ್ಯಾಹ್ನ ಸ್ವದೇಶಕ್ಕೆ ಆಗಮಿಸಲಿದ್ದಾರೆ.

ಎರಡು ದಿನಗಳಿಂದ ಪಾಕ್ ಕಪಿ ಮುಷ್ಟಿಯಲ್ಲಿದ್ದ ಅಭಿನಂದನ್‍ರನ್ನು ಶಾಂತಿ ಸ್ಥಾಪನೆ ಉದ್ದೇಶದಿಂದ ಬಿಡುಗಡೆ ಮಾಡೋದಾಗಿ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಸಂಸತ್‍ನಲ್ಲಿ ಹೇಳಿದ್ದರು. ಯಾವುದೇ ಷರತ್ತುಗಳಿಲ್ಲದೆ ಭಾರತದ ವಶಕ್ಕೆ ಒಪ್ಪಿಸುವುದಾಗಿ ಘೋಷಿಸಿದ್ದಾರೆ. ಸದ್ಯ ರಾವಲ್ಪಿಂಡಿಯ ಸೇನಾ ಮುಖ್ಯಕಚೇರಿಯಲ್ಲಿರುವ ಅಭಿನಂದನ್ ಅವರು ಆರೋಗ್ಯವಾಗಿದ್ದಾರೆ.

ಇಂದು ರಾವಲ್ಪಿಂಡಿಯಿಂದ ಲಾಹೋರ್‍ಗೆ ಅಭಿನಂದನ್‍ರನ್ನು ಕರೆ ತಂದು ಭಾರತೀಯ ವಾಯು ಸೇನೆಯ ಗ್ರೂಪ್ ಕ್ಯಾಪ್ಟನ್ ಥಾಮಸ್ ಕುರಿಯನ್ ಅವರಿಗೆ ಪಾಕ್ ಒಪ್ಪಿಸಲಿದೆ. ರಾಜತಾಂತ್ರಿಕ ಮಾರ್ಗದ ಮೂಲಕ ಅಭಿನಂದನ್‍ರನ್ನು ಬಂಧಮುಕ್ತವಾಗಿಸುವಲ್ಲಿ ಭಾರತ ಯಶಸ್ವಿಯಾಗಿದೆ.

ಈ ಬೆಳವಣಿಗೆಗಳ ಬೆನ್ನಲ್ಲೇ ಹೇಳಿಕೆ ನೀಡಿರುವ ಕೇಂದ್ರ ಸರ್ಕಾರ, ವಿಂಗ್ ಕಮಾಂಡರ್ ಅಭಿನಂದನ್ ಯಾವುದೇ ತಪ್ಪು ಮಾಡಿರಲಿಲ್ಲ. ಅವರನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಯಾವುದೇ ಕಾರಣಗಳೂ ಇರಲಿಲ್ಲ. ಹೀಗಾಗಿ ನಮ್ಮ ಹೆಮ್ಮೆಯ ವಿಂಗ್ ಕಮಾಂಡರ್ ಅಭಿನಂದನ್‍ರನ್ನು ಪಾಕಿಸ್ತಾನ ಬಿಡುಗಡೆ ಮಾಡುತ್ತಿದೆ ಎಂದಿದೆ.

ಈ ಮಧ್ಯೆ, ಅಭಿನಂದನ್ ಸ್ವಾಗತಕ್ಕೆ ಅವಕಾಶ ಕೋರಿ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಇತ್ತ ದೇಶವೇ ಅಭಿನಂದನ್ ಬರುವಿಕೆಗಾಗಿ ಕಾಯುತ್ತಿದೆ.

ಅಭಿನಂದನ್ ಬಿಡುಗಡೆಗೆ ಕಾರಣಗಳೇನು:
* ಪಾಕಿಸ್ತಾನಕ್ಕೆ ಯುದ್ಧದ ಭೀತಿ – (ಅಭಿನಂದನ್ ರಿಲೀಸ್ ಮಾಡ್ತೀವಿ.. ಮೊದಲು ಮಾತುಕತೆಗೆ ಬನ್ನಿ ಎಂದಿತ್ತು ಪಾಕ್. ಆದರೆ ನೋ ಡೀಲ್ ಮೊದಲು ಬಿಡುಗಡೆ ಮಾಡಿ ಅಂತ ಸಂದೇಶ ರವಾನಿಸಿದ್ದ ಭಾರತ)
* ರಾಜತಾಂತ್ರಿಕವಾಗಿ ಪಾಕ್ ಮೇಲೆ ಒತ್ತಡ (ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಮೇಲೆ ಒತ್ತಡ ಹೇರಿದ ಭಾರತ. ಯುದ್ಧ ಮತ್ತು ಜಗತ್ತಿನಲ್ಲಿ ಏಕಾಂಗಿಯಾಗುವ ಭಯದಿಂದ ಬಿಡುಗಡೆಗೆ ಸಮ್ಮತಿ)
* ಜಗತ್ತಿನ ಬಲಾಢ್ಯ ರಾಷ್ಟ್ರಗಳಿಂದ ಒತ್ತಡ (ಅಮೆರಿಕ ಅಧ್ಯಕ್ಷರ ಎಚ್ಚರಿಕೆ, ಪಾಕ್‍ನಿಂದ ದೂರ ಸರಿದ ಚೀನಾ, ಸೌದಿ ದೊರೆಗಳ ನಿರಂತರ ಒತ್ತಡ ತಂತ್ರ)
* ಜಿನೀವಾ ಒಪ್ಪಂದದಿಂದಾಗಿ ಅಭಿನಂದನ್ ಬಿಡುಗಡೆ (2ನೇ ಮಹಾಯುದ್ಧದ ಬಳಿಕ 1949ರಲ್ಲಿ 196 ದೇಶಗಳ ನಡುವೆ ಏರ್ಪಟ್ಟ ಒಪ್ಪಂದ. ಈ ಒಪ್ಪಂದ ಪ್ರಕಾರ ಯುದ್ಧ ಕೈದಿಗಳನ್ನು ಮಾನವೀಯವಾಗಿ ನಡೆಸಿಕೊಳ್ಳಬೇಕು. ಕಾನೂನು ಪ್ರಕ್ರಿಯೆಗಳನ್ನು ಮಾಡದೇ, ಆರೋಪ ಸಾಬೀತಾಗದೇ ಶಿಕ್ಷೆ ನೀಡಬಾರದು).

https://www.youtube.com/watch?v=uW6-FMkUzBU

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *