ಇಂದು ಮಂಡ್ಯ‌ ಮೈತ್ರಿ ಅಭ್ಯರ್ಥಿ ಘೋಷಣೆ – ಸಕ್ಕರೆ ನಾಡಿನಿಂದ ಹೆಚ್‌ಡಿಕೆ ಸ್ಪರ್ಧೆ ಫಿಕ್ಸ್?

ಮಂಡ್ಯ: ಸಕ್ಕರೆ ನಾಡು ಮಂಡ್ಯ (Mandya) ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯ ವಿಚಾರ ಸಾಕಷ್ಟು ಕುತೂಹಲ ಮೂಡಿಸಿದೆ. ಮಂಡ್ಯ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಯಾರು ಸ್ಪರ್ಧೆ ಮಾಡ್ತಾರೆ ಎಂವ ಕೌತುಕ ರಾಜಕೀಯ ವಲಯದಲ್ಲಿ ಮೂಡಿತ್ತು. ಇಂದು (ಮಂಗಳವಾರ) ಈ ಎಲ್ಲಾ ಕುತೂಹಲಕ್ಕೂ ತೆರೆ ಬೀಳಲಿದೆ.

ಇಷ್ಟು ದಿನಗಳ ಕಾಲ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ (H.D.Kumaraswamy) ಆಗ್ತಾರಾ ಅಥವಾ ನಿಖಿಲ್ ಕುಮಾರಸ್ವಾಮಿ ಆಗುತ್ತಾರಾ ಎಂಬ ಪ್ರಶ್ನೆಗಳು ಎದ್ದಿದ್ದವು. ಇದೀಗ ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರೇ ಕಣಕ್ಕೆ ಇಳಿಯಲಿದ್ದಾರೆ. ಇದನ್ನೂ ಓದಿ: ನಾನು ಈಗ ಮಧುಮಗ ಇದ್ದಂತೆ, ಕಾರ್ಯಕರ್ತರು ನನ್ನ ಪೋಷಕರು: ಬಿಎನ್ ಚಂದ್ರಪ್ಪ

ಮಂಡ್ಯ ಜಿಲ್ಲೆಯ ಜೆಡಿಎಸ್‌ ನಾಯಕರು ಹಾಗೂ ಕಾರ್ಯಕರ್ತರು ಒತ್ತಡ ಏರಿದಾಗಲೇ ಕುಮಾರಸ್ವಾಮಿ ಅವರು ಮಂಡ್ಯದಿಂದ ಸ್ಪರ್ಧೆ ಮಾಡುವ ಮನಸ್ಸು ಮಾಡಿದ್ರು. ಆದರೆ ರಾಮನಗರ ಜಿಲ್ಲೆಯ ಮುಖಂಡರು‌ ಹಾಗೂ ಕಾರ್ಯಕರ್ತರು ಮಂಡ್ಯ ಸ್ಪರ್ಧೆ ಬೇಡಾ. ರಾಮನಗರದಲ್ಲಿಯೇ ಕುಮಾರಸ್ವಾಮಿ ಇರಬೇಕು. ನಿಖಿಲ್ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧೆ ಮಾಡುವಂತೆ ಹೇಳಿದ್ರು. ಹೀಗಾಗಿ ಕುಮಾರಸ್ವಾಮಿ ಅವರು ಮಂಡ್ಯ ಸ್ಪರ್ಧೆ ವಿಚಾರದಲ್ಲಿ ಸ್ವಲ್ಪ ಗೊಂದಲದಲ್ಲಿ‌ ಇದ್ದರು.

ನಿನ್ನೆ ರಾಮನಗರ ಜಿಲ್ಲೆಯ ಮುಖಂಡರು ಹಾಗೂ ಕಾರ್ಯಕರ್ತರನ್ನು ಬೆಂಗಳೂರಿನ ತಮ್ಮ ನಿವಾಸಕ್ಕೆ ಕರೆದು ಕುಮಾರಸ್ವಾಮಿ ಮಾತನಾಡಿದ್ದಾರೆ. ಈ ವೇಳೆ ಮಂಡ್ಯದಲ್ಲಿ ಸ್ಪರ್ಧೆ ಮಾಡುವ ಅನಿವಾರ್ಯತೆ ಬಗ್ಗೆ ಕಾರ್ಯಕರ್ತರಿಗೆ ಹೆಚ್‌ಡಿಕೆ ತಿಳಿಸಿದ್ದಾರೆ. ಬಳಿಕ ರಾಮನಗರ ಜಿಲ್ಲೆಯ ಜನರು ಮಂಡ್ಯದಲ್ಲಿ ಕುಮಾರಸ್ವಾಮಿ ಅವರ ಸ್ಪರ್ಧೆಗೆ ಒಪ್ಪಿಗೆ ಸೂಚಿಸಿದ್ದಾರೆ. ಈ ಮೂಲಕ ಮಂಡ್ಯದಿಂದ ಕುಮಾರಸ್ವಾಮಿ ಅವರ ಸ್ಪರ್ಧೆ ಪಕ್ಕ ಆಗಿದೆ. ಇದನ್ನೂ ಓದಿ: ದೋಸ್ತಿ ಪಕ್ಷದ ಪವರ್‌ ಸೆಂಟರ್‌ ಆಗಿ ಬದಲಾಯ್ತು ಹೆಚ್‌ಡಿಕೆ ನಿವಾಸ!

ಹೆಚ್‌ಡಿಕೆ ಮಂಡ್ಯದಿಂದ ಸ್ಪರ್ಧೆ ಮಾಡೋದು ಕನ್ಫರ್ಮ್‌ ಆಗಿದ್ದು, ಇಂದು ಅಧಿಕೃತವಾಗಿ ಘೋಷಣೆಯಾಗಲಿದೆ. ಇದೀಗ ಕುಮಾರಸ್ವಾಮಿ ಸ್ಪರ್ಧೆಯ ವಿರುದ್ಧ ಕಾಂಗ್ರೆಸ್ ಯಾವ ದಾಳ ಉರುಳಿಸುತ್ತೆ ಎನ್ನುವುದು ಕುತೂಹಲ.