ಇಡಿ ಸಮನ್ಸ್ – ಡಿಕೆಶಿ ಪತ್ನಿ ಉಷಾ ಸಲ್ಲಿಸಿದ್ದ ಅರ್ಜಿ ಇಂದು ವಿಚಾರಣೆ

ನವದೆಹಲಿ: ಜಾರಿ ನಿರ್ದೇಶನಾಲಯ(ಇಡಿ) ನೀಡಿರುವ ಸಮನ್ಸ್ ರದ್ದು ಮತ್ತು ಬೆಂಗಳೂರಿನಲ್ಲಿ ವಿಚಾರಣೆ ನಡೆಸಲು ಸೂಚಿಸುವಂತೆ ಕೋರಿ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಪತ್ನಿ ಉಷಾ ಅವರು ಸಲ್ಲಿಸಿರುವ ಅರ್ಜಿ ಇಂದು ವಿಚಾರಣೆಗೆ ಬರಲಿದೆ.

ದೆಹಲಿ ಹೈಕೋರ್ಟಿನ ನ್ಯಾ. ಬ್ರಿಜೇಶ್ ಸೇಥಿ ನೇತೃತ್ವದ ಏಕ ಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ. ಡಿ.ಕೆ ಶಿವಕುಮಾರ್ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಇಡಿ ಡಿಕೆಶಿ ಅವರ ಪತ್ನಿ ಉಷಾ ಮತ್ತು ತಾಯಿ ಗೌರಮ್ಮ ಅವರಿಗೆ ದೆಹಲಿಗೆ ಬಂದು ವಿಚಾರಣೆ ಎದುರಿಸುವಂತೆ ಸಮನ್ಸ್ ಜಾರಿ ಮಾಡಿತ್ತು. ಇಡಿ ನೀಡಿದ್ದ ಸಮನ್ಸ್ ಪ್ರಶ್ನೆ ಮಾಡಿದ್ದ ಉಷಾ ಮತ್ತು ಗೌರಮ್ಮ ದೆಹಲಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.

ಗೌರಮ್ಮಗೆ 85 ವರ್ಷ ವಯಸ್ಸಾದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ವಿಚಾರಣೆ ನಡೆಸಲು ಇಡಿ ಅಧಿಕಾರಿಗಳು ಕಳೆದ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದರು. ಹೀಗಾಗಿ ಗೌರಮ್ಮ ಸಲ್ಲಿಸಿದ್ದ ತಮ್ಮ ಅರ್ಜಿಯನ್ನು ಹಿಂಪಡೆದುಕೊಂಡಿದ್ದು, ಉಷಾ ಸಲ್ಲಿಸಿರುವ ಅರ್ಜಿ ಇಂದು ವಿಚಾರಣೆ ಬರಲಿದೆ.

ಕಳೆದ ವಿಚಾರಣೆಯಲ್ಲಿ ವಾದ ಮಂಡಿಸಿದ್ದ ಇಡಿ ಪರ ವಕೀಲರು, ಗೌರಮ್ಮ ಹೊರತುಪಡಿಸಿ ಪ್ರಕರಣಕ್ಕೆ ಸಂಬಂಧಿಸಿದವರು ದೆಹಲಿಗೆ ಬಂದು ವಿಚಾರಣೆ ಎದುರಿಸಲಿ ಯಾವುದೇ ಕಾರಣಕ್ಕೂ ಉಷಾ ಅವರನ್ನು ಬೆಂಗಳೂರಿನಲ್ಲಿ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಹೈಕೋರ್ಟ್ ಬೆಂಗಳೂರಿನಲ್ಲಿ ವಿಚಾರಣೆ ಅವಕಾಶ ನೀಡಿದ್ದಲ್ಲಿ ಇತರೆ ಪ್ರಕರಣದ ಆರೋಪಿಗಳು ತಮ್ಮ ಸ್ವಂತ ಸ್ಥಳಗಳಲ್ಲಿ ವಿಚಾರಣೆ ಪಟ್ಟು ಹಿಡಿಯುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಉಷಾ ಅವರ ಪರ ವಾದ ಮಂಡಿಸಿದ್ದ ವಕೀಲರು ಮಾತ್ರ ಗೌರಮ್ಮ ಜೊತೆ ಉಷಾ ಅವರ ವಿಚಾರಣೆ ಕೂಡ ಆಗಲಿ ಅನ್ನೋ ಬೇಡಿಕೆ ಇಟ್ಟಿದ್ದರು.

ವಾದ ಪ್ರತಿವಾದ ಆಲಿಸಿದ್ದ ಪೀಠ ಉಷಾ ಪರ ವಕೀಲರಿಗೆ ಕಾನೂನು ವ್ಯಾಪ್ತಿಯಲ್ಲಿ ವಾದ ಮುಂದುವರಿಸುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಉಷಾ ಪರ ವಕೀಲರು ವಾದ ಮಂಡಿಸಲಿದ್ದಾರೆ. ಇದೇ ಪ್ರಕರಣದ ಮತ್ತೋರ್ವ ಆರೋಪಿ ಡಿ.ಕೆ ಶಿವಕುಮಾರ್ ಆಪ್ತ ಆಂಜನೇಯ ಸಂಬಂಧಿಗಳಿಗೂ ಇಡಿ ಸಮನ್ಸ್ ನೀಡಿದ್ದು, ಅವರು ಕೂಡ ಬೆಂಗಳೂರಿನಲ್ಲಿ ವಿಚಾರಣೆಗೆ ಬೇಡಿಕೆ ಇಟ್ಟಿದ್ದಾರೆ. ಉಷಾ ಅರ್ಜಿ ವಿಚಾರಣೆ ವೇಳೆ ಈ ಅರ್ಜಿಗಳು ಕೂಡ ವಿಚಾರಣೆಗೆ ಬರಲಿದೆ.

Comments

Leave a Reply

Your email address will not be published. Required fields are marked *