ಇಂದು ಮಾಜಿ ಸಿಎಂ ಹೃದಯಕ್ಕೆ ಶಸ್ತ್ರ ಚಿಕಿತ್ಸೆ- ಜ್ಯೋತಿಷಿ ಮಾತು ನಂಬಿ ಸಮಯ ನಿಗದಿ

ಬೆಂಗಳೂರು: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಮಾಜಿ ಸಿಎಂ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‍ಡಿ ಕುಮಾರಸ್ವಾಮಿಗೆ ಇಂದು ಶಸ್ತ್ರಚಿಕಿತ್ಸೆ ನಡೆಯಲಿದೆ.

ಆಪರೇಷನ್‍ಗೆ ದಿನಾಂಕ ಅಂತಿಮಗೊಳಿಸಿದ್ದು ವೈದ್ಯರಲ್ಲ ಬದಲಿಗೆ ಜ್ಯೋತಿಷಿಗಳಂತೆ. ದೇವರು, ಜ್ಯೋತಿಷ್ಯವನ್ನು ಅತಿಯಾಗಿ ನಂಬುವ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಹೆಚ್‍ಡಿಕೆ ಆಪರೇಷನ್‍ಗೂ ಒಳ್ಳೆಯ ದಿನಕ್ಕಾಗಿ ಜ್ಯೋತಿಷಿಗಳ ಮೊರೆ ಹೋಗಿತ್ತು. ಇದೇ ಮಾರ್ಚ್, ಆಗಸ್ಟ್‍ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರೂ ಹೃದಯದ ಐರೋಟಿಕ್ ವಾಲ್ವ್ ಶಸ್ತ್ರಚಿಕಿತ್ಸೆಗೆ ಸೆಪ್ಟೆಂಬರ್ 23ರಂದು ಸಮಯ ನಿಗದಿ ಮಾಡಿದ್ದರು.

ಇಂದು ತದಿಗೆ ಜೊತೆಗೆ ಕಾವೇರಿ ಪುಷ್ಕರದ ಕೊನೆಯ ದಿನ. ಜ್ಯೋತಿಷ್ಯದ ಪ್ರಕಾರ ಒಳ್ಳೆಯ ದಿನ. ಈ ಹಿನ್ನೆಲೆಯಲ್ಲಿ ಜ್ಯೋತಿಷಿಗಳ ಸಲಹೆಯಂತೆ ಹೆಚ್‍ಡಿಕೆ ಇಂದಿನ ದಿನವನ್ನು ಆಪರೇಷನ್‍ಗಾಗಿ ಆಯ್ಕೆ ಮಾಡಿಕೊಂಡಿದ್ದರು. ಇಂದು ಬೆಳಗ್ಗೆ 9.30ರೊಳಗೆ ರಾಹುಕಾಲ ಆರಂಭವಾಗಲಿದೆ. ಅದಕ್ಕೂ ಮೊದಲೇ ಹೆಚ್‍ಡಿಕೆ ಆಪರೇಷನ್ ಥಿಯೇಟರ್‍ಗೆ ಹೋಗಲಿದ್ದಾರೆ.

ಬೆಂಗಳೂರಿನ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ ಸಿ.ಮಂಜುನಾಥ್ ಮಾರ್ಗದರ್ಶನದಲ್ಲಿ ಅಪೋಲೋ ಆಸ್ಪತ್ರೆಯ ಡಾ.ಸತ್ಯಕಿ ಮತ್ತವರ ವೈದ್ಯರ ತಂಡ ಆಪರೇಷನ್ ಮಾಡಲಿದೆ. 4 ಗಂಟೆ ಆಪರೇಷನ್ ನಡೆಯಲಿದೆ. ನಾಲ್ಕು ದಿನಗಳ ವಿಶ್ರಾಂತಿ ಬಳಿಕ ಸಿಂಗಾಪುರ್‍ಗೆ ಹೋಗಿ ಒಂದಷ್ಟು ದಿನ ವಿಶ್ರಾಂತಿ ಪಡೆಯಲು ಹೆಚ್‍ಡಿಕೆ ತೀರ್ಮಾನಿಸಿದ್ದಾರೆ. ತಮ್ಮ ನೆಚ್ಚಿನ ನಾಯಕ ಶೀಘ್ರ ಗುಣಮುಖರಾಗಲಿಯೆಂದು ಇತ್ತ ಕಾರ್ಯಕರ್ತರು ಹೋಮ ಹವನ ಮಾಡಿಸ್ತಿದ್ದಾರೆ.

ಎಂಎಲ್‍ಸಿ ಶರವಣ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಮೃತ್ಯುಂಜಯ ಹೋಮ, ಇತರೆ ದೇವಾಲಯಗಳಲ್ಲಿ ವಿಶೇಷ ಪೂಜೆ ಹಮ್ಮಿಕೊಂಡಿದ್ದಾರೆ. ಮುಸ್ಲಿಮರು ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಕುರುಕ್ಷೇತ್ರದ ಸೆಟ್‍ನಲ್ಲಿದ್ದ ಪುತ್ರ ನಟ ನಿಖಿಲ್ ಹೈದರಾಬಾದ್‍ನಿಂದ ಬಂದು ಆರೋಗ್ಯ ವಿಚಾರಿಸಿದ್ರು. ಆಸ್ಪತ್ರೆಗೆ ದಾಖಲಾಗೋ ಮುನ್ನ ಹೆಚ್‍ಡಿಕೆ ತಾಯಿ ಚನ್ನಮ್ಮರ ಆಶೀರ್ವಾದ ಪಡೆದ್ರು.

Comments

Leave a Reply

Your email address will not be published. Required fields are marked *