‘ಮಗಳು ಜಾನಕಿ’ 1ನೇ ಎಪಿಸೋಡಿನಿಂದ ಮರುಪ್ರಸಾರ ಮಾಡೋದು ಕಷ್ಟ – ಟಿ.ಎನ್.ಸೀತಾರಾಮ್

ಬೆಂಗಳೂರು: ಕೊರೊನಾ ಭೀತಿಯಿಂದ ಸಿನಿಮಾ, ಸೀರಿಯಲ್, ಕೆಲಸ ಎಲ್ಲವೂ ಸಂಪೂರ್ಣವಾಗಿ ಬಂದ್ ಆಗಿದೆ. ಹೀಗಾಗಿ ಈಗಾಗಲೇ ಕೆಲ ಸೀರಿಯಲ್‍ಗಳು ಹಳೆಯ ಎಪಿಸೋಡ್‍ಗಳನ್ನೇ ಮರುಪ್ರಸಾರ ಮಾಡುತ್ತಿದೆ. ಇದೀಗ ಜನಪ್ರಿಯ ನಿರ್ದೇಶಕ ಟಿ.ಎನ್.ಸೀತಾರಾಮ್ ಅವರು ತಾವು ನಿರ್ದೇಶನ ಮಾಡುತ್ತಿರುವ ಧಾರವಾಹಿಯನ್ನು ಒಂದನೇ ಎಪಿಸೋಡಿನಿಂದ ಮರುಪ್ರಸಾರ ಮಾಡಲು ಸಾಧ್ಯವಿಲ್ಲ ಎಂದು ಪ್ರೇಕ್ಷಕರಿಗೆ ತಿಳಿಸಿದ್ದಾರೆ.

ಲಾಕ್‍ಡೌನ್ ಇರುವುದರಿಂದ ಸಿನಿಮಾ, ಸೀರಿಯಲ್ ಶೂಟಿಂಗ್ ಕ್ಯಾನ್ಸಲ್ ಆಗಿದೆ. ಆದರೂ ಹೆಚ್ಚಿನ ಎಪಿಸೋಡ್ ಚಿತ್ರೀಕರಿಸಿಕೊಂಡಿದ್ದ ಕೆಲ ಸೀರಿಯಲ್‍ಗಳು ಈಗಲೂ ಹೊಸ ಎಪಿಸೋಡುಗಳನ್ನು ಪ್ರಸಾರ ಮಾಡುತ್ತಿವೆ. ಆದರೆ ಕೆಲವು ಸೀರಿಯಲ್‍ಗಳು ಮೊದಲನೇಯ ಎಪಿಸೋಡ್‍ನಿಂದ ಮತ್ತೆ ಮರು ಪ್ರಸಾರ ಮಾಡುತ್ತಿವೆ.

 

ಸೀತಾರಾಮ್ ಅವರು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಮಗಳು ಜಾನಕಿ’ ಧಾರವಾಹಿಯನ್ನು ನಿರ್ದೇಶನ ಮಾಡುತ್ತಿದ್ದಾರೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಸೀರಿಯಲ್ ಶೂಟಿಂಗ್ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಒಂದನೇ ಎಪಿಸೋಡಿನಿಂದ ಮರುಪ್ರಸಾರ ಮಾಡಲು ತೀರ್ಮಾನಿಸಿದ್ದರು. ಅದರಂತೆಯೇ ಕಳೆದ ದಿನ “ಲಾಕ್‍ಡೌನ್ ಮುಗಿದ ಮೇಲೆ ಹೊಸ ಎಪಿಸೋಡುಗಳು ಶುರುವಾಗುತ್ತವೆ. ಅಲ್ಲಿವರೆಗೆ ಒಂದನೇ ಎಪಿಸೋಡಿನಿಂದ ಮರುಪ್ರಸಾರವಾಗುತ್ತದೆ. ವೀಕ್ಷಕರು ದಯವಿಟ್ಟು ಸಹಕರಿಸಬೇಕು” ಎಂದು ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದರು.

 

ಇಂದು ಮತ್ತೊಂದು ಪೋಸ್ಟ್ ಮಾಡಿ ಒಂದನೇ ಎಪಿಸೋಡಿನಿಂದ ಪ್ರಸಾರ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. “ಮಗಳು ಜಾನಕಿ ಒಂದನೇ ಎಪಿಸೋಡಿನಿಂದ ಮರುಪ್ರಸಾರ ಮಾಡುವುದು ಕಷ್ಟವಿದೆ. ಒಂದರಿಂದ 370ನೇ ಎಪಿಸೋಡುಗಳವರೆಗೆ ಮುಂಬೈ ಸರ್ವರ್ ನಲ್ಲಿ ಕುಳಿತು ಬಿಟ್ಟಿದೆ. ಅದನ್ನು ತೆಗೆದು ಅಪ್ಲೋಡ್ ಮಾಡಲು ಅಲ್ಲಿ ಯಾರೂ ಆಫೀಸ್‍ಗೆ ಹೋಗುತ್ತಿಲ್ಲ. 371 ರಿಂದ ಮರುಪ್ರಸಾರ ಮಾಡುವ ಸಾಧ್ಯತೆ ಇರುವುದು ಎಂದು ಚಾನಲ್ ಅಧಿಕಾರಿಗಳು ತಿಳಿಸಿದರು” ಎಂದು ಬರೆದುಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *